
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದಲ್ಲಿನ ನಾದಿ ಗ್ರಾಮದಲ್ಲಿ ಭದ್ರತಾ ಪಡೆಗಳು ನಡೆಸಿದ ತೀವ್ರ ಕಾರ್ಯಾಚರಣೆಯಲ್ಲಿ ಮೂವರು ಜೈಶ್-ಎ-ಮೊಹಮ್ಮದ್ ಉಗ್ರರು ಗುರುವಾರ ಮುಂಜಾನೆ ಎನ್‌ಕೌಂಟರ್‌ನಲ್ಲಿ ಬಲಿಯಾಗಿದ್ದಾರೆ. ಕಳೆದ 48 ಗಂಟೆಗಳ ಅವಧಿಯಲ್ಲಿ ಇದು ನಡೆದ ಎರಡನೇ ಉಗ್ರ ನಿಗ್ರಹ ಕಾರ್ಯಾಚರಣೆಯಾಗಿದ್ದು, ಭದ್ರತಾ ಘಟಕಗಳ ಸಕ್ರಿಯತೆ ಮತ್ತೊಮ್ಮೆ ಬೆಳಕಿಗೆ ಬಂದಿದೆ.
ಭದ್ರತಾ ಸಂಸ್ಥೆಗಳಿಗೆ ಲಭ್ಯವಾಗಿದ್ದ ಖಚಿತ ಮಾಹಿತಿಯ ಮೇರೆಗೆ ನಾದರ್ ಅರಣ್ಯ ಪ್ರದೇಶದಲ್ಲಿ ಉಗ್ರರು ಅಡಗಿರುವುದನ್ನು ದೃಢಪಡಿಸಿದ ಬಳಿಕ, ಭದ್ರತಾ ಪಡೆಗಳು ಆ ಪ್ರದೇಶವನ್ನು ಸುತ್ತುವರಿದು ಕಾರ್ಯಾಚರಣೆ ಆರಂಭಿಸಿತು. ಈ ಸಂದರ್ಭದಲ್ಲಿ ಉಗ್ರರು ಗುಂಡು ಹಾರಿಸಲು ಪ್ರಾರಂಭಿಸಿದ ಹಿನ್ನಲೆಯಲ್ಲಿ ಪ್ರತಿಯಾಗಿ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರು ಹೊಡೆದುರುಳಿದರು.
ಇದೇ ರೀತಿಯಲ್ಲಿ ಮಂಗಳವಾರದಂದು ಶೋಪಿಯಾನ್‌ನಲ್ಲಿ ನಡೆದ ಕಾರ್ಯಾಚರಣೆಯಲ್ಲಿಯೂ ಮೂವರು ಲಷ್ಕರ್-ಎ-ತೊಯ್ಬಾ ಉಗ್ರರು ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದರು. ಈ ಆಪರೇಷನ್‌ಗೆ ‘ಆಪರೇಷನ್ ಕೆಲ್ಲರ್’ ಎಂಬ ಹೆಸರನ್ನು ನೀಡಲಾಗಿತ್ತು.
ಅದರಲ್ಲಿ ಹೊಡೆದುರುಳಿದ ಮೂವರು ಉಗ್ರರಲ್ಲಿ ಇಬ್ಬರನ್ನು ಶಾಹಿದ್ ಕುಟ್ಟಯ್ ಮತ್ತು ಅದ್ಮಾನ್ ಶಫಿಯಾಗಿ ಗುರುತಿಸಲಾಗಿದೆ. ಇಬ್ಬರೂ ಶೋಪಿಯಾನ್ ಮೂಲದವರಾಗಿದ್ದು, ಶಾಹಿದ್ 2023ರಲ್ಲಿ ಲಷ್ಕರ್ ಸಂಘಟನೆಯಲ್ಲಿ ಸೇರ್ಪಡೆಯಾಗಿದ್ದ. ಈತನು ಕಳೆದ ವರ್ಷ ಏಪ್ರಿಲ್ 8ರಂದು ಡ್ಯಾನಿಶ್ ರೆಸಾರ್ಟ್‌ನಲ್ಲಿ ನಡೆದ ದಾಳಿಯಲ್ಲಿ ಭಾಗಿಯಾಗಿದ್ದ. ಆ ದಾಳಿಯಲ್ಲಿ ಇಬ್ಬರು ಜರ್ಮನ್ ಪ್ರವಾಸಿಗರು ಹಾಗೂ ಒಬ್ಬ ಚಾಲಕ ಗಾಯಗೊಂಡಿದ್ದರು. ಮೇ 2024ರಲ್ಲಿ ಶೋಪಿಯಾನ್‌ನ ಹೀರ್‌ಪೋರಾ ಪ್ರದೇಶದಲ್ಲಿ ಬಿಜೆಪಿ ಸರಪಂಚನ ಹತ್ಯೆಯಲ್ಲಿಯೂ ಶಾಹಿದ್ ಪಾತ್ರವಹಿಸಿದ್ದ ಎಂದು ಭದ್ರತಾ ಮೂಲಗಳು ತಿಳಿಸಿವೆ.