
ಸಂಘಟನೆಯ ಬಲವರ್ಧನೆಗೆ ಶ್ರೀ ಬಾಲಗಂಗಾಧರ ತಿಲಕ್ ರವರು ಪಾರಂಭಿಸಿದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮ : ವೇದಮೂರ್ತಿ ಶ್ರೀ ರಾಜೇಂದ್ರ ಪ್ರಸಾದ್
ಜೋಡುರಸ್ತೆ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಜೋಡುರಸ್ತೆ ಇದರ 42ನೇ ವರ್ಷದ ಶ್ರೀ ಗಣೇಶೋತ್ಸವ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಕುಕ್ಕುಂದೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕರಾದ ವೇದಮೂರ್ತಿ ಶ್ರೀ ರಾಜೇಂದ್ರಪ್ರಸಾದ್ ರವರು ನಡೆಸಿಕೊಟ್ಟರು.ಇವರು ಮಾತನಾಡಿ ಸಾರ್ವಜನಿಕವಾಗಿ ಶ್ರೀ ಗಣೇಶನನ್ನು ಪೂಜಿಸುವ ಕ್ರಮ ಸ್ವಾತಂತ್ರ್ಯ ಪೂರ್ವದಿಂದ ಬಂದಿದೆ. ಕಾರ್ಯಕ್ರಮವನ್ನು ಪ್ರಪ್ರಥಮವಾಗಿ ಸ್ವಾತಂತ್ರ್ಯ ಹೋರಾಟಗಾರರಾದ ಬಾಲ ಗಂಗಾಧರ ತಿಲಕ್ ರವರು ಪ್ರಾರಂಭಿಸಿರುತ್ತಾರೆ. ಏಕೆಂದರೆ ಯಾವುದೇ ಸಂಘಟನೆ ಆಗಬೇಕಾದರೆ ಎಲ್ಲಾ ಮತದವರು ಹುಮ್ಮಸ್ಸಿನಿಂದ, ಒಗ್ಗಟ್ಟಿನಿಂದ ಇದ್ದರೆ ಮಾತ್ರ ಸಂಘಟನೆ ಹಾಗೂ ಸತ್ಕಾರ್ಯಗಳು ಉತ್ತಮವಾಗಿ ನಡೆದು ಸಮಾಜಕ್ಕೆ ಪ್ರಯೋಜನಗಳು ಸಿಗಲು ಸಾಧ್ಯ. ಅಂತಹದನ್ನು ದೇವರ ಪೂಜೆಯ ಮೂಲಕ ನಮಗೆ ಪರಿಚಯಿಸಿ ಕೊಟ್ಟಿರುವ ಗಂಗಾಧರ ತಿಲಕ್ ಇವರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾಗುತ್ತದೆ. ಅದರಂತೆ ನಮ್ಮ ಗ್ರಾಮದಲ್ಲೂ ಕೂಡ ಈ ಒಂದು ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ವಿಶೇಷವಾಗಿ ನಡೆಯಲ್ಪಡುತ್ತದೆ . ಅದೇ ರೀತಿ ಎಲ್ಲಾ ಭಕ್ತರು ಸೇರಿ ದೇವರಿಗೆ ಬೆಳ್ಳಿಯ ಪ್ರಭಾವಳಿಯನ್ನು ಸಮರ್ಪಿಸುವ ಮೂಲಕ ಈ ಬಾರಿ ಕಾರ್ಯಕ್ರಮವನ್ನು ಬಹಳ ವಿಶೇಷವಾಗಿ ನಡೆಸಲಿರುವುದರಿಂದ ಈ ಒಂದು ಪ್ರಭಾವಳಿಗೆ ಸಹಕರಿಸಿದ ಊರಿನ ಪರ ಊರಿನ ದಾನಿಗಳಿಗೆ ದೇವರು ಒಳಿತನ್ನು ಮಾಡಲಿ. ಕಾರ್ಯಕ್ರಮ ಯಾವುದೇ ವಿಘ್ನವಿಲ್ಲದೆ ವಿಜೃಂಭಣೆಯಿಂದ ಸಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಸಂತೋಷ್ ರಾವ್ ರವರು ಉತ್ಸವ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ದಿನಾಂಕ 27.08.2025 ರಿಂದ 31.08.2025 ರವರೆಗೆ ಐದು ದಿನಗಳ ಕಾಲ ನಡೆಯಲಿದ್ದು ದೇವರ ಪೂಜೆ, ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 17-08-2025 ರಂದು ನಡೆಯುವ ಆಟೋಟ ಸ್ಪರ್ಧೆಯ ವಿವರವನ್ನು ತಿಳಿಸುವುದರ ಜೊತೆಗೆ ಈ ಭಾರಿ ಎಲ್ಲಾ ಭಕ್ತರ ಸಹಕಾರದಿಂದ ಬೆಳ್ಳಿಯ ಪ್ರಭಾವಳಿಯನ್ನು ದೇವರಿಗೆ ಸಮರ್ಪಿಸುವ ಕಾರ್ಯವನ್ನು ಹಮ್ಮಿಕೊಂಡಿದ್ದು ಇದರ ಮೊತ್ತ 18 ಲಕ್ಷದಿಂದ 20 ಲಕ್ಷದವರೆಗೆ ಅಂದಾಜಿಸಿದ್ದು ಎಲ್ಲರ ಸಹಕಾರದಿಂದ ಈಡೇರಲಿದೆ. ಐದು ದಿನದಲ್ಲಿ ನಡೆಯುವ ಈ ವಿಜೃಂಭಣೆಯ ಕಾರ್ಯಕ್ರಮಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಮನವಿಯನ್ನು ಮಾಡಿಕೊಂಡರು.
ಈ ಸಂದರ್ಭದಲ್ಲಿ ಸಮಿತಿ ಪದಾಧಿಕಾರಿಗಳು, ಪ್ರಮುಖರು ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆ ಹಾಗೂ ವಂದನಾರ್ಪಣೆಯನ್ನು ಪ್ರಸಾದ್ ಐಸಿರ ಇವರು ನಡೆಸಿಕೊಟ್ಟರು.