
ಹಲವಾರು ವಿವಾದಗಳಿಗೆ ಕಾರಣವಾದ ಬೈಲೂರು ಉಮಿಕಲ್ ಬೆಟ್ಟದ ಮೇಲಿನ ಪರಶುರಾಮ ಥೀಮ್ ಪಾರ್ಕ್ ನಲ್ಲಿ ಮತ್ತೆ ನೈಜ ಕಂಚಿನ ಪರಶುರಾಮ ಪ್ರತಿಮೆ ಪ್ರತಿಷ್ಟಾಪನೆಗಾಗಿ ಉದಯ ಶೆಟ್ಟಿ ಮುನಿಯಾಲು ಅವರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವುದನ್ನು ಬೈಲೂರಿನ ಹಿರಿಯ ಮುಖಂಡರಾದ ಸುಧೀರ್ ಹೆಗ್ಡೆ ಸ್ವಾಗತಿಸಿದ್ದಾರೆ.
2023 ರ ಜನವರಿಯಲ್ಲಿ ಬೈಲೂರಿನ ಉಮಿಕಲ್ ಬೆಟ್ಟದ ಮೇಲೆ ಪರಶುರಾಮ ಪ್ರತಿಮೆ ಪ್ರತಿಷ್ಠಾಪನೆಯಾದಾಗ ನಮ್ಮೂರಿನಲ್ಲಿ ರಾಜ್ಯದ ಪ್ರಮುಖ ಪ್ರವಾಸಿ ಕೇಂದ್ರ ಉದ್ಘಾಟನೆಯಾಗಿದೆ ಎಂದು ಸ್ಥಳೀಯರಾದ ನಾವು ಅತ್ಯಂತ ಸಂತಸಪಟ್ಟಿದ್ದೆವು , ಆದರೆ ಪ್ರತಿಮೆ ನಿರ್ಮಾಣದಲ್ಲಾದ ಲೋಪ ದೋಷಗಳ ವಿವಾದದಿಂದಾಗಿ ಊರಿನವರಾದ ನಮ್ಮ ಸಂತಸವು ಹೆಚ್ಚು ಸಮಯ ಉಳಿಯದೆ ನಮಗೆ ಬೇಸರ ಉಂಟಾಗಿದೆ. ಪರಶುರಾಮ ಪ್ರತಿಮೆ ವಿವಾದದಿಂದಾಗಿ ನಮ್ಮೂರಿನ ಹೆಸರು ಪದೇ ಪದೇ ಮಾದ್ಯಮದಲ್ಲಿ ಬರುತ್ತಿರುವುದರಿಂದ ನಮಗೆ ತೀವ್ರ ಮುಜುಗರ ಉಂಟಾಗಿದೆ.
ಪ್ರತಿಮೆ ನಿರ್ಮಾಣದ ವಿಚಾರದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಆ ಬಗ್ಗೆ ನಮ್ಮ ಅಭ್ಯಂತರವಿಲ್ಲ. ಆದರೆ ಯಾರದ್ದೋ ತಪ್ಪಿನಿಂದಾಗಿ ಊರವರಾದ ನಮಗೆ ತೀವ್ರ ಮುಜುಗರ ಉಂಟಾಗುತ್ತಿದೆ. ಹಾಗಾಗಿ ಮತ್ತೆ ಅದೇ ಜಾಗದಲ್ಲಿ ಕಂಚಿನ ಪರಶುರಾಮ ಪ್ರತಿಮೆ ನಿರ್ಮಾಣ ಆಗಬೇಕು. ಆ ಮೂಲಕ ಊರಿಗೆ ಅಂಟಿದ ಕಳಂಕದ ಕೊಳೆ ತೊಳೆದು ಹೋಗಬೇಕು ಎನ್ನುವುದು ಸ್ಥಳೀಯರ ಹಾಗೂ ಗ್ರಾಮಸ್ಥರಾದ ನಮ್ಮೆಲ್ಲರ ಆಶಯವಾಗಿದೆ. ಮಾಧ್ಯಮಗಳಲ್ಲಿ ವರದಿಯಾದಂತೆ ಇಲ್ಲಿ ಮತ್ತೆ ಕಂಚಿನ ಪರಶುರಾಮ ಪ್ರತಿಮೆ ನಿರ್ಮಾಣವಾಗಬೇಕು ಎಂದು ಉದಯ ಶೆಟ್ಟಿ ಮುನಿಯಾಲು ಅವರು ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿರುವುದನ್ನು ನಾವೆಲ್ಲ ಸ್ವಾಗತಿಸುತ್ತೇವೆ ಮತ್ತು ತುಳುನಾಡಿನ ಸೃಷ್ಠಿಕರ್ತ ಮಹಾವಿಷ್ಣುವಿನ ಅವತಾರವಾಗಿರುವ ಭಗವಾನ್ ಪರಶುರಾಮನ ಕಂಚಿನ ಪ್ರತಿಮೆ ಪುನರ್ ಪ್ರತಿಷ್ಠಾಪನೆಯ ಕೆಲಸ ಕಾರ್ಯಗಳಿಗೆ ಊರವರಾಗಿ ನಾವೆಲ್ಲರೂ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಸುಧೀರ್ ಹೆಗ್ಡೆ ಮಾದ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.