
ಬೆಂಗಳೂರು: ರಾಜ್ಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಪರೀಕ್ಷೆ-2 ಇದೇ ಏಪ್ರಿಲ್ 24ರಿಂದ ಮೇ 8ರವರೆಗೆ ಮತ್ತು ಪರೀಕ್ಷೆ-3 ಜೂನ್ 9ರಿಂದ 21ರವರೆಗೆ ನಡೆಯಲಿದೆ. ಪರೀಕ್ಷೆ-1ರಲ್ಲಿ ಪಾಸ್ ಆಗದ ವಿದ್ಯಾರ್ಥಿಗಳು ಮತ್ತು ತಮ್ಮ ಫಲಿತಾಂಶವನ್ನು ಉತ್ತಮಗೊಳಿಸಬೇಕೆಂದು ಆಸೆಪಡುವ ವಿದ್ಯಾರ್ಥಿಗಳಿಗೆ ಈ ಎರಡೂ ಪರೀಕ್ಷೆಗಳಲ್ಲಿ ಯಾವುದೇ ಶುಲ್ಕವಿಲ್ಲದೇ ಭಾಗವಹಿಸಲು ಅವಕಾಶ ನೀಡಲಾಗಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿಗಳು ಏಪ್ರಿಲ್ 9ರಿಂದ 17ರೊಳಗಾಗಿ ತಮ್ಮ ಕಾಲೇಜುಗಳಲ್ಲಿ ಹೆಸರು ನೋಂದಾಯಿಸಿ ಪರೀಕ್ಷೆ ಬರೆಯಬಹುದು. ಈ ಮೂಲಕ ಶಿಕ್ಷಕರ ಮಾರ್ಗದರ್ಶನದಲ್ಲಿ ತಯಾರಿ ನಡೆಸಿ ಉತ್ತಮ ಫಲಿತಾಂಶವನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಬೇಸಿಗೆ ರಜೆಯಲ್ಲಿ ತರಗತಿ : ಉಪನ್ಯಾಸಕರ ಸಂಘದ ಆಕ್ರೋಶ !
ಪದವಿ ಪೂರ್ವ ಶಿಕ್ಷಣ ಇಲಾಖೆಯು ಪರೀಕ್ಷೆ-2ಗೆ ನೋಂದಾಯಿಸುವ ವಿದ್ಯಾರ್ಥಿಗಳಿಗಾಗಿ ಬೇಸಿಗೆ ರಜೆಯಲ್ಲಿಯೇ ವಿಶೇಷ ತರಗತಿಗಳನ್ನು ನಡೆಸುವಂತೆ ಸೂಚನೆ ನೀಡಿದ್ದು, ಇದಕ್ಕೆ ಪಿಯು ಉಪನ್ಯಾಸಕರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಸಂಘದ ಅಧ್ಯಕ್ಷ ಎ.ಎಚ್. ನಿಂಗೇಗೌಡ ಅವರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿದ್ದು, ಇಂತಹ ಸುತ್ತೋಲೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ ‘ವಿಭಾಗವೇ ರಜೆ ರಹಿತ’ ಎಂದು ಘೋಷಿಸಬೇಕೆಂಬ ಬೇಡಿಕೆ ಮುಂದಿಟ್ಟಿದ್ದಾರೆ.