
ಕಾಠ್ಮಂಡು: ನೇಪಾಳದಲ್ಲಿ ಭುಗಿಲೆದ್ದ ಭ್ರಷ್ಟಾಚಾರ ವಿರೋಧಿ ಮತ್ತು ಸರ್ಕಾರದ ವಿರುದ್ಧದ ಪ್ರತಿಭಟನೆಗಳು ಹಿಂಸಾತ್ಮಕ ರೂಪ ಪಡೆದ ಹಿನ್ನೆಲೆಯಲ್ಲಿ ಪ್ರಧಾನಿ ಕೆ.ಪಿ.ಶರ್ಮಾ ಓಲಿ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಯ ನಂತರ ಪ್ರಧಾನಿ ದೇಶ ತೊರೆಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಪ್ರತಿಭಟನೆ ತೀವ್ರ ಸ್ವರೂಪ
ಸೋಮವಾರದಿಂದ ಆರಂಭವಾದ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಂಡು ಹಿಂಸಾಚಾರಕ್ಕೆ ತಿರುಗಿದ್ದವು. ಮೊದಲ ದಿನವೇ 20 ಜನರು ಸಾವನ್ನಪ್ಪಿ, 250ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಆದರೂ, ಸಾಮಾಜಿಕ ಮಾಧ್ಯಮಗಳ ಮೇಲಿನ ನಿಷೇಧ ತೆರವುಗೊಳಿಸಿದ್ದರೂ ಎರಡನೇ ದಿನವೂ ಪ್ರತಿಭಟನೆ ಮುಂದುವರಿದಿದೆ. ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿ ಓಲಿ ರಾಜೀನಾಮೆಗೆ ಆಗ್ರಹಿಸಿದ್ದರು.
ಅಧ್ಯಕ್ಷರ ನಿವಾಸಕ್ಕೆ ಬೆಂಕಿ
ಬೃಹತ್ ಪ್ರತಿಭಟನೆಯ ವೇಳೆ ಉದ್ರಿಕ್ತ ಗುಂಪುಗಳು ಅಧ್ಯಕ್ಷ ರಾಮ್ ಚಂದ್ರ ಪೌಡೆಲ್ ಅವರ ನಿವಾಸಕ್ಕೆ ಬೆಂಕಿ ಹಚ್ಚಿದ್ದು, ವ್ಯಾಪಕ ಹಾನಿ ಮಾಡಿದ್ದಾರೆ. ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಪರಿಸ್ಥಿತಿ ಕೈ ಮೀರುತ್ತಿದ್ದ ಕಾರಣ ಮುಂಜಾಗ್ರತಾ ಕ್ರಮವಾಗಿ ರಾಜಧಾನಿ ಕಾಠ್ಮಂಡು ಸೇರಿದಂತೆ ಹಲವೆಡೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಸೇನೆಯ ನೆರವು ಕೋರಿದ್ದ ಪ್ರಧಾನಿ
ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಪ್ರಧಾನಿ ಓಲಿ ಅವರು ಸೇನಾ ಮುಖ್ಯಸ್ಥ ಜನರಲ್ ಅಶೋಕ್ ರಾಜ್ ಸಿಗ್ಡೆಲ್ ಅವರೊಂದಿಗೆ ಮಾತನಾಡಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಮತ್ತು ತನ್ನನ್ನು ಸುರಕ್ಷಿತವಾಗಿ ಪ್ರಧಾನಿ ನಿವಾಸದಿಂದ ಹೊರ ಕರೆದೊಯ್ಯಲು ಮಿಲಿಟರಿ ಸಹಾಯವನ್ನು ಕೋರಿದ್ದರು. ಆದರೆ, ಓಲಿ ಅವರು ರಾಜೀನಾಮೆ ನೀಡಿದರೆ ಮಾತ್ರ ಸೇನೆ ಪರಿಸ್ಥಿತಿ ನಿಯಂತ್ರಿಸುತ್ತದೆ ಎಂದು ಸೇನಾ ಮುಖ್ಯಸ್ಥರು ಸೂಚಿಸಿದ್ದಾರೆ ಎಂದು ವರದಿಯಾಗಿದೆ.