
ಬೆಂಗಳೂರು: ಸರ್ಕಾರಿ ಸ್ಥಳಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಚಟುವಟಿಕೆಗಳನ್ನು ಪ್ರಶ್ನಿಸುವ ಮತ್ತು ತಡೆಯುವ ಧೈರ್ಯ ಮಾಡಿದ್ದಕ್ಕೆ ತಮಗೆ ಮತ್ತು ತಮ್ಮ ಕುಟುಂಬಕ್ಕೆ ಕಳೆದೆರಡು ದಿನಗಳಿಂದ ಬೆದರಿಕೆ ಹಾಗೂ ಅತ್ಯಂತ ಕೀಳು ನಿಂದನೆಗಳಿಂದ ತುಂಬಿದ ಕರೆಗಳು ಬರುತ್ತಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಆದರೆ, ಇದರಿಂದ ಯಾವುದೇ ಕಾರಣಕ್ಕೂ ವಿಚಲಿತನಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಈ ಮಾಹಿತಿ ಹಂಚಿಕೊಂಡು ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಇಂತಹ ಬೆದರಿಕೆ ಕರೆಗಳಿಂದ ನನಗೆ ಅಚ್ಚರಿ ಆಗಿಲ್ಲ. ಮಹಾತ್ಮಾಗಾಂಧೀಜಿ ಅಥವಾ ಅಂಬೇಡ್ಕರ್ ಅವರಂಥ ಮಹಾನ್ ನಾಯಕರನ್ನೇ ಆರ್‌ಎಸ್‌ಎಸ್ ಬಿಟ್ಟಿಲ್ಲ, ಇನ್ನು ಅವರು ನನ್ನನ್ನು ಹೇಗೆ ಬಿಡುತ್ತಾರೆ?” ಎಂದು ಪ್ರಶ್ನಿಸಿದರು.
“ಬೆದರಿಕೆ ಮತ್ತು ವೈಯಕ್ತಿಕ ನಿಂದನೆಗಳಿಂದ ನನ್ನ ಬಾಯ್ಮುಚ್ಚಿಸಬಹುದು ಎಂದು ಅವರು ಭಾವಿಸಿದ್ದರೆ ಅದು ಅವರ ಕಲ್ಪನೆ ಮಾತ್ರ. ಇದಿನ್ನೂ ಆರಂಭವಷ್ಟೇ,” ಎಂದು ಖರ್ಗೆ ತಿರುಗೇಟು ನೀಡಿದರು.
ಬುದ್ಧ, ಬಸವಣ್ಣ ಮತ್ತು ಅಂಬೇಡ್ಕರ್ ತತ್ವಗಳ ಕಾಲ
“ಇದು ಬುದ್ಧ, ಬಸವಣ್ಣ ಮತ್ತು ಅಂಬೇಡ್ಕರ್ ಅವರ ತತ್ವಗಳ ಮೇಲೆ ಸಮಾಜ ನಿರ್ಮಿಸುವ ಕಾಲ. ಸಮಾನತೆ, ವಿವೇಚನೆ ಮತ್ತು ಕರುಣೆಯಲ್ಲಿ ಬೇರೂರಿರುವ ಸಮಾಜ ಹಾಗೂ ರಾಷ್ಟ್ರವನ್ನು ಅತ್ಯಂತ ಅಪಾಯಕಾರಿ ವೈರಸ್‌ಗಳಿಂದ ಶುದ್ಧೀಕರಿಸುವ ಸಮಯ,” ಎಂದು ಅವರು ಅಭಿಪ್ರಾಯಪಟ್ಟರು. ವಿರೋಧ ಪಕ್ಷದಲ್ಲಿದ್ದಾಗಲೇ ಹೆದರಲಿಲ್ಲ, ಈಗ ಅಧಿಕಾರದಲ್ಲಿದ್ದಾಗ ಹೆದರುತ್ತೇನೆಯೇ? ಎಂದು ಪ್ರಶ್ನಿಸಿದರು.
ಬಿಎಸ್‌ವೈ ವಿರುದ್ಧ ‘ಕಪ್ಪ’ ಆರೋಪದ ಸವಾಲು
ಬಿಜೆಪಿ ನಾಯಕರ ನಿರಂತರ ಟೀಕೆಗಳಿಗೆ ಪ್ರತಿಕ್ರಿಯಿಸಿದ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ, “ದಿವಂಗತ ಅನಂತಕುಮಾರ್ ಅವರ ಕಿವಿಯಲ್ಲಿ ಮುಖ್ಯಮಂತ್ರಿ ಆಗಬೇಕಾದರೆ ಕಪ್ಪ (ಹಣ) ಕೊಡಬೇಕಾಗುತ್ತದೆ. ಸುಮ್ಮನೆ ಆಗಲ್ಲ ಎಂದು ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ್ದರು. ಅದರ ವಿಡಿಯೋ ಸಾಕ್ಷ್ಯ ಕೂಡ ಇದೆ. ಬಿಜೆಪಿಯವರು ಮೊದಲು ಅದರ ಬಗ್ಗೆ ಉತ್ತರ ಕೊಡಲಿ,” ಎಂದು ಸವಾಲು ಹಾಕಿದರು.
ಇದೇ ವೇಳೆ, ಬಿ.ವೈ.ವಿಜಯೇಂದ್ರ ಅವರು ಅಮಿತ್ ಶಾ ಅವರಿಗೆ ಬಿಟ್ ಕಾಯಿನ್ ನೀಡಿದ್ದಾರೆ. ಹೀಗಾಗಿಯೇ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮುಂದುವರೆದಿದ್ದಾರೆ. ಹಾಗಾದರೆ ಆರ್. ಅಶೋಕ್ ಅವರು ಪ್ರತಿಪಕ್ಷ ನಾಯಕರಾಗಿ ಮುಂದುವರೆಯಲು ನೂರು ಕೋಟಿ ನೀಡಿದ್ದಾರೆ ಎಂದು ನಾನು ಹೇಳುತ್ತೇನೆ ಎಂದು ವ್ಯಂಗ್ಯವಾಡಿದರು. “ಬಿಜೆಪಿಯವರು ಗಾಳಿಯಲ್ಲಿ ಗುಂಡು ಹೊಡೆಯುವುದು ಬಿಟ್ಟು ಪುರಾವೆ ನೀಡಲಿ,” ಎಂದು ಆಗ್ರಹಿಸಿದರು.
ಎನ್. ರವಿಕುಮಾರ್ ಒತ್ತಾಯ: ಈ ಮಧ್ಯೆ, ಸಚಿವ ಸ್ಥಾನದಿಂದ ಪ್ರಿಯಾಂಕ್ ಖರ್ಗೆ ಅವರನ್ನು ವಜಾಗೊಳಿಸಬೇಕು ಎಂದು ಬಿಜೆಪಿ ನಾಯಕ ಎನ್. ರವಿಕುಮಾರ್ ಒತ್ತಾಯಿಸಿದ್ದಾರೆ.