
ಬೆಂಗಳೂರು: ಬಿಜೆಪಿಯಿಂದ ತಿರಸ್ಕೃತಗೊಂಡ ‘ನಿರುದ್ಯೋಗಿ’ ಪ್ರತಾಪ್ ಸಿಂಹ ಅವರು ಕೇವಲ ಸುದ್ದಿಯಲ್ಲಿರಲು ಮೈಸೂರಿನ ಪತ್ರಕರ್ತರ ಕೈಕಾಲು ಹಿಡಿದು, “ಪ್ರತಿದಿನವೂ ನನ್ನ ಪ್ರತಿಕ್ರಿಯೆ ತಗೊಳ್ಳಿ” ಎಂದು ಅಂಗಲಾಚುತ್ತಿದ್ದಾರೆ ಎಂಬುದು ಮಾಧ್ಯಮ ಮಿತ್ರರ ‘ಆಫ್ ದಿ ರೆಕಾರ್ಡ್’ ವರದಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತೀವ್ರವಾಗಿ ಲೇವಡಿ ಮಾಡಿದ್ದಾರೆ.
ಈ ಸಂಬಂಧ ತಮ್ಮ ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
“ಎಲ್ಲಾ ವಿಷಯಕ್ಕೂ ಬಾಯಿ ಹಾಕುವ ಪ್ರತಾಪ್ ಸಿಂಹರವರು ಬಿಜೆಪಿ ಪಕ್ಷದ ಯಾವ ‘ಪೊಸಿಷನ್’ನಲ್ಲಿದ್ದಾರೆ ಎನ್ನುವುದನ್ನು ಮೊದಲು ಸ್ಪಷ್ಟಪಡಿಸಬೇಕು! ನನ್ನ ಅರ್ಹತೆಯನ್ನು ಪ್ರಶ್ನಿಸುವ ಪ್ರತಾಪ್ ಸಿಂಹರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದ್ದು ಅವರಿಗೆ ಅರ್ಹತೆ ಇಲ್ಲದ್ದಕ್ಕೆ ಅಲ್ಲವೇ?” ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
‘ನನ್ನ ಅರ್ಹತೆಯನ್ನು ಕೇಂದ್ರದ ದಾಖಲೆಗಳೇ ಹೇಳುತ್ತವೆ’
ತಮ್ಮ ಇಲಾಖೆಗಳ ಕಾರ್ಯವೈಖರಿಯ ಬಗ್ಗೆ ಮಾತನಾಡಿದ ಸಚಿವರು, “ನನ್ನ ಅರ್ಹತೆಯ ಬಗ್ಗೆ ನಾನು ಹೇಳಿಕೊಳ್ಳುವುದಕ್ಕಿಂತ ಬಿಜೆಪಿಯ ಕೇಂದ್ರ ಸರ್ಕಾರದ ದಾಖಲೆಗಳು, ಅಂಕಿ ಅಂಶಗಳು ಹೇಳುತ್ತವೆ,” ಎಂದರು.
- ಪಂಚಾಯತ್ ರಾಜ್ ವಿಕೇಂದ್ರೀಕರಣದಲ್ಲಿ ಕರ್ನಾಟಕ ನಂ.1 ಸ್ಥಾನದಲ್ಲಿದೆ ಎಂದು ಹೇಳಿದ್ದು ಕೇಂದ್ರ ಸರ್ಕಾರ.
- ಕರ್ನಾಟಕದ ಗ್ರಾಮ ಪಂಚಾಯಿತಿಗಳು ತೆರಿಗೆ ಸಂಗ್ರಹದಲ್ಲಿ ದಾಖಲೆಯ ಸಾಧನೆ ಮಾಡಿದೆ ಎಂದು ಒಪ್ಪಿಕೊಂಡಿದ್ದು ಕೇಂದ್ರ ಸರ್ಕಾರ.
- ಐಟಿ ರಫ್ತಿನಲ್ಲಿ 38\% ಪಾಲು ಹೊಂದುವ ಮೂಲಕ ಕರ್ನಾಟಕ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ.
- ಅತಿ ಹೆಚ್ಚು R&D ಕೇಂದ್ರಗಳನ್ನು ಹೊಂದುವ ಮೂಲಕ ನವೋದ್ಯಮಗಳಿಗೆ ಉತ್ತೇಜನ ನೀಡುವ ಪ್ರಥಮ ರಾಜ್ಯ ಕರ್ನಾಟಕ.
“ಪ್ರತಾಪ್ ಸಿಂಹ ಅವರು ಒಂದಿಷ್ಟು ಅಧ್ಯಯನ ನಡೆಸುವ, ಆಗುಹೋಗುಗಳ ಸುದ್ದಿಯನ್ನು ಓದುವ ಅಭ್ಯಾಸ ಹೊಂದಿದ್ದರೆ ಇದೆಲ್ಲವೂ ತಿಳಿಯುತ್ತಿತ್ತು,” ಎಂದು ಟೀಕಿಸಿದ್ದಾರೆ.
‘ಮೋದಿ ಸರ್ಟಿಫಿಕೇಟ್ ಎಲ್ಲಿ?’
ವಾಗ್ದಾಳಿಯನ್ನು ಮುಂದುವರಿಸಿದ ಅವರು, “ಅಂದ ಹಾಗೆ ಪ್ರತಾಪ್ ಸಿಂಹ ಅವರೇ, ನಿಮ್ಮ ನರೇಂದ್ರ ಮೋದಿಯವರ ವಿದ್ಯಾರ್ಹತೆ ಏನು? ಸರ್ಟಿಫಿಕೇಟ್ ಎಲ್ಲಿ? ಪೇಪರ್ ಸಿಂಹ, ನಿಮ್ಮ ಕತ್ತಲೆ ಜಗತ್ತಿನಲ್ಲಿ ಎಂತೆಂತಹ ಕರಾಳ ಕತೆಗಳ ರಹಸ್ಯ ಅಡಗಿವೆ? ಕತ್ತಲೆ ಜಗತ್ತಿನ ರಹಸ್ಯಗಳ ಪುಸ್ತಕಕ್ಕೆ ನೀವು ತಡೆಯಾಜ್ಞೆ ತಂದಿರುವುದೇಕೆ?” ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.



































