
ಕೊಪ್ಪಳ: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಈಗ “ಜೋಕರ್ ತರ ಆಗಿದ್ದಾರೆ” ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ತೀವ್ರ ವಾಗ್ದಾಳಿ ನಡೆಸಿದರು.
ಕೊಪ್ಪಳ ತಾಲೂಕಿನ ಮೆತಗಲ್ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರಿಗೆ ಏನು ಮಾತನಾಡಬೇಕು ಮತ್ತು ಏನು ಮಾತನಾಡಬಾರದು ಎನ್ನುವುದು ಗೊತ್ತಿಲ್ಲ. “ಆರ್ ಎಸ್ ಎಸ್ ದೇಶದ ಸುರಕ್ಷತೆಗಾಗಿ ಸ್ಥಾಪನೆಯಾಗಿ ಮಗುವಿಗೆ ಸಂಸ್ಕಾರ ಕಲಿಸುತ್ತದೆ. ಅಂಥ ರಾಷ್ಟ್ರೀಯತೆ ಇರುವ ಸಂಸ್ಥೆ ಬಗ್ಗೆ ಮಾತನಾಡಿದ್ದಾರೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರನ್ನು ಮೆಚ್ಚಿಸಲು ಇಂತಹ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎನಿಸುತ್ತದೆ,” ಎಂದು ರೆಡ್ಡಿ ಟೀಕಿಸಿದರು.
ವಿಧಾನ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರು ಆರ್ ಎಸ್ ಎಸ್ ಗೀತೆ ಹಾಡಿದ ನಂತರ ಪಕ್ಷದಲ್ಲಿ ವಿರೋಧ ಉಂಟಾದ ಕಾರಣ, ಈಗ ಪ್ರಿಯಾಂಕ್ ಖರ್ಗೆ ಆರ್ ಎಸ್ ಎಸ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಜನಾರ್ದನ ರೆಡ್ಡಿ ಅಭಿಪ್ರಾಯಪಟ್ಟರು.
ಸಿಎಂ ಅನುದಾನ ತಾರತಮ್ಯದ ಬಗ್ಗೆ ಆಕ್ರೋಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕರಿಗೆ ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿರುವುದು ಸರಿಯಲ್ಲ ಎಂದು ಜನಾರ್ದನ ರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದರು.
“ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂ. ಬಿಡುಗಡೆ ಮಾಡುವ ಸಿಎಂ, ಬಿಜೆಪಿ-ಜೆಡಿಎಸ್ ಶಾಸಕರಿಗೆ 25 ಕೋಟಿ ರೂ. ಕೊಡುವುದಾಗಿ ಹೇಳಿದ್ದಾರೆ. ಅನುದಾನ ಹಂಚಿಕೆಯಲ್ಲಿ ಸಿಎಂ ತಾರತಮ್ಯ ಮಾಡಬಾರದು. ಅವರು ಈ ರಾಜ್ಯದ ಮುಖ್ಯಮಂತ್ರಿ, ಪಕ್ಷಾತೀತವಾಗಿ ಎಲ್ಲ ಶಾಸಕರನ್ನು ನೋಡಿಕೊಳ್ಳಬೇಕು. ಅನುದಾನ ಹಂಚಿಕೆಯಲ್ಲಿ ಬೇಧ-ಭಾವ ಸರಿಯಲ್ಲ. ಈ ಕಾರಣಕ್ಕಾಗಿ ಅನುದಾನ ಹಂಚಿಕೆ ಸಂಬಂಧ ಜೆಡಿಎಸ್‌ನವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ,” ಎಂದರು.
ಇದೇ ವೇಳೆ, ಕೊಪ್ಪಳದಲ್ಲಿ ಇತ್ತೀಚೆಗೆ ನಡೆದ ಸಿಎಂ ಭಾಗವಹಿಸಿದ್ದ ಸರ್ಕಾರಿ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವೆಂಬಂತೆ ಬಿಂಬಿಸಲಾಯಿತು. ಆದ್ದರಿಂದ ತಾವು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಹೋಗಲಿಲ್ಲ ಎಂದು ವಿವರಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿತ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಆರೋಪಿಸಿದ ಜನಾರ್ದನ ರೆಡ್ಡಿ, “ಕೂಕನೂರು ಪಿಎಸ್‌ಐ ಅಮಾನತು ವಿಚಾರ, ಯಾದಗಿರಿಯಲ್ಲಿ ಎಎಸ್ಐ ಕಿಡ್ನಾಪ್ ಆಗಿದೆ. ರಾಜ್ಯದಲ್ಲಿ ಜನರಿಗೂ ಮತ್ತು ಪೊಲೀಸರಿಗೂ ರಕ್ಷಣೆಯಿಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಆಡಳಿತ ವ್ಯವಸ್ಥೆ ಕುಸಿದಿದೆ. ದಲಿತರಿಗೂ ರಕ್ಷಣೆ ದೊರೆಯುತ್ತಿಲ್ಲ,” ಎಂದು ಆಡಳಿತ ವ್ಯವಸ್ಥೆಯ ವಿರುದ್ಧ ವಾಗ್ದಾಳಿ ನಡೆಸಿದರು.