
ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಕುರಿತಾದ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವಿನ ವಾಕ್ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ. ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ತೀಕ್ಷ್ಣವಾದ ತಿರುಗೇಟು ನೀಡಿದ್ದಾರೆ.
ಪುತ್ರನಿಗೆ ಗಣವೇಷ (RSS ಸಮವಸ್ತ್ರ) ಹಾಕಿಸಿ, ಅದನ್ನು ಪ್ರಚಾರಕ್ಕೆ ಬಳಸಿಕೊಂಡಿದ್ದ ಸುನೀಲ್ ಕುಮಾರ್‌ಗೆ ಸವಾಲು ಹಾಕಿದ ಪ್ರಿಯಾಂಕ್ ಖರ್ಗೆ, “ಒಂದು ದಿನ ಗಣ ವೇಷ ಹಾಕಿದರೆ ಅಲ್ಲ. ನಿಮ್ಮ ಮಗನನ್ನು ಶಾಲೆ-ಕಾಲೇಜು ಬಿಡಿಸಿ, ಶಾಖೆಗೆ ಕಳುಹಿಸಿ. ತ್ರಿಶೂಲ ದೀಕ್ಷೆ ಕೊಡಿಸಿ, ಪೂರ್ಣ ಪ್ರಮಾಣದ ಕಾರ್ಯಕರ್ತ ಮಾಡಿ,” ಎಂದು ಸವಾಲು ಹಾಕಿದರು.
ಸುನೀಲ್ ಕುಮಾರ್ ಹೇಳಿದ್ದೇನು?
ಕಳೆದ ದಿನ ಸುನೀಲ್ ಕುಮಾರ್, ಸಂಘವು ತಮ್ಮ ಪೀಳಿಗೆಯ ಬಳುವಳಿ ಎಂದು ಹೇಳಿದ್ದರು. “ಸಂಘ, ಸಂಘಸ್ಥಾನ, ಗಣವೇಶ ನಮಗೆ ಪ್ರಚಾರದ ಸರಕಲ್ಲ, ಅದು ಸಂಸ್ಕಾರ. ನನ್ನ ತಂದೆ ವಾಸುದೇವ ಸಂಘದ ಶ್ರದ್ಧೆಯ ಸ್ವಯಂಸೇವಕ. ನನ್ನ ಮಗ ದತ್ತಾತ್ರೇಯ ಸುನೀಲ್ ಕುಮಾರ್ ಕೂಡಾ ಸಂಘದ ಸ್ವಯಂಸೇವಕ. ನಾನು ನನ್ನ ಮಗನನ್ನು ಸ್ವಯಂಸೇವಕನಾಗಿ ಮಾಡುತ್ತೇನೆಯೇ ವಿನಾ ಶಾಸಕನನ್ನಾಗಿಯಲ್ಲ,” ಎಂದಿದ್ದರು.
ಅಲ್ಲದೆ, “ಅಧಿಕಾರ ನನ್ನಪ್ಪನಿಂದ ನನಗೆ, ನನ್ನಿಂದ ನನ್ನ ಮುಂದಿನ ಪೀಳಿಗೆಗೆ ಎಂದು ಯೋಚಿಸುವ ಕುಟುಂಬ ರಾಜಕಾರಣದ ಪಳೆಯುಳಿಕೆಗಳಿಗೆ ಈ ಪರಂಪರೆ ಅರ್ಥವಾಗುವುದೂ ಇಲ್ಲ,” ಎಂದು ಕಾಂಗ್ರೆಸ್‌ಗೆ ಟಾಂಗ್ ನೀಡಿದ್ದರು.
ಕುಟುಂಬ ರಾಜಕಾರಣದ ಬಗ್ಗೆ ಖರ್ಗೆ ಪ್ರಶ್ನೆ
ಸುನೀಲ್ ಕುಮಾರ್ ಅವರ ‘ಕುಟುಂಬ ರಾಜಕಾರಣ’ದ ಹೇಳಿಕೆಗೆ ತಿರುಗೇಟು ನೀಡಿದ ಪ್ರಿಯಾಂಕ್ ಖರ್ಗೆ, “ಅವರು ಹೇಳ್ತಾರೆ ಕುಟುಂಬ ರಾಜಕಾರಣ ಅಂತ. ಹಾಗಾದ್ರೆ ಯಡಿಯೂರಪ್ಪ ಕುಟುಂಬ ಏನು? ಇವರಿಗೇ ಸಿಗಬೇಕಿತ್ತಂತೆ ರಾಜ್ಯಾಧ್ಯಕ್ಷ ಸ್ಥಾನ. ಹಾಗಾದ್ರೆ ಯಾಕೆ ತಪ್ಪು? ಅಲ್ಲದೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಯಾಕೆ ರಾಜಿನಾಮೆ ಕೊಟ್ರು? ನನಗೆ ಇಂಟರೆಸ್ಟ್ ಇಲ್ಲ ಅಂತ ಯಾಕೆ ಹೇಳಿದರು?” ಎಂದು ಬಿಜೆಪಿ ನಾಯಕರನ್ನೇ ಪ್ರಶ್ನಿಸಿದರು.



































