
ಮುಂಬೈ : ವೈಯಕ್ತಿಕ ವಿಡಿಯೊಗಳನ್ನು ಬಹಿರಂಗಪಡಿಸುವ ಬೆದರಿಕೆ ಹಾಕಿ, ಬ್ಲಾಕ್‌ಮೇಲ್ ಮಾಡಿದ್ದರಿಂದಾಗಿ ಮುಂಬೈನ ಸಾಂತಾಕ್ರೂಜ್ (ಪೂರ್ವ)ದ ಯಶವಂತ ನಗರದ 32 ವರ್ಷದ ಚಾರ್ಟರ್ಡ್ ಅಕೌಂಟೆಂಟ್ (CA) ರಾಜ್ ಲೀಲಾ ಮೋರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ರಾಜ್, ಸ್ಥಳದಲ್ಲಿ ದೊರೆತ ಮೂರು ಪುಟಗಳ ಆತ್ಮಹತ್ಯೆ ಪತ್ರದಲ್ಲಿ ತಮ್ಮ ಸಾವಿಗೆ ರಾಹುಲ್ ಪರ್ವಾನಿ ಮತ್ತು ಸಬಾ ಖುರೇಷಿ ಎಂಬ ಇಬ್ಬರು ವ್ಯಕ್ತಿಗಳು ಕಾರಣ ಎಂದು ಸ್ಪಷ್ಟವಾಗಿ ಬರೆದಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಮಹಿಳೆ ಸೇರಿದಂತೆ ಇಬ್ಬರು ಆರೋಪಿಗಳ ವಿರುದ್ಧ ಸುಲಿಗೆ (extortion) ಮತ್ತು ಆತ್ಮಹತ್ಯೆಗೆ ಪ್ರಚೋದನೆ (abetment to suicide) ಆರೋಪದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.
3 ಕೋಟಿಗೂ ಹೆಚ್ಚು ಹಣ ಸುಲಿಗೆ, ಐಷಾರಾಮಿ ಕಾರು ವಶಕ್ಕೆ! ಪೊಲೀಸ್ ಅಧಿಕಾರಿಗಳು ನೀಡಿರುವ ಮಾಹಿತಿಯಂತೆ, ಆರೋಪಿಗಳು ರಾಜ್ ಅವರ ಖಾಸಗಿ ವಿಡಿಯೊವನ್ನು ಪ್ರಸಾರ ಮಾಡುವುದಾಗಿ ಬೆದರಿಸಿ ಕಳೆದ 18 ತಿಂಗಳುಗಳಲ್ಲಿ 3 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಸುಲಿಗೆ ಮಾಡಿದ್ದಾರೆ. ಮೃತ ರಾಜ್ ಅವರ ತಾಯಿ ತಮ್ಮ ಹೇಳಿಕೆಯಲ್ಲಿ, ಕಳೆದ ಕೆಲವು ತಿಂಗಳುಗಳಿಂದ ರಾಜ್ ತೀವ್ರ ಮಾನಸಿಕ ಒತ್ತಡದಲ್ಲಿದ್ದರು ಎಂದು ತಿಳಿಸಿದ್ದಾರೆ.
ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ, ರಾಜ್ ತನ್ನ ಸಾವಿಗೆ ರಾಹುಲ್ ಮತ್ತು ಸಬಾ ಅವರನ್ನು ನೇರವಾಗಿ ದೂಷಿಸಿದ್ದಾನೆ. ಪೊಲೀಸ್ ಮೂಲಗಳ ಪ್ರಕಾರ, ಆರೋಪಿಗಳಿಗೆ ರಾಜ್ ಅವರ ಷೇರು ಮಾರುಕಟ್ಟೆಯಲ್ಲಿನ ದೊಡ್ಡ ಹೂಡಿಕೆಗಳು ಮತ್ತು ಸಿಎ ಆಗಿ ಅವರ ಹೆಚ್ಚಿನ ಸಂಬಳದ ಕೆಲಸದ ಬಗ್ಗೆ ತಿಳಿದಿತ್ತು. ಇದನ್ನೇ ದುರುಪಯೋಗಪಡಿಸಿಕೊಂಡ ಆರೋಪಿಗಳು, ರಾಜ್ ಅವರ ಕಂಪನಿಯ ಖಾತೆಯಿಂದ ದೊಡ್ಡ ಮೊತ್ತವನ್ನು ತಮ್ಮ ವೈಯಕ್ತಿಕ ಖಾತೆಗಳಿಗೆ ವರ್ಗಾಯಿಸುವಂತೆ ಒತ್ತಾಯಿಸಿದ್ದಾರೆ. ಇಷ್ಟೇ ಅಲ್ಲದೆ, ಆರೋಪಿಗಳು ರಾಜ್‌ನಿಂದ ಐಷಾರಾಮಿ ಕಾರೊಂದನ್ನು ಬಲವಂತವಾಗಿ ಪಡೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.