
ಮಂಗಳೂರು: ನಗರದ ಕೊಡಿಯಾಲ್ ಬೈಲಿನ ಸಬ್ ಜೈಲಿನಲ್ಲಿ ಎರಡು ಕೋಮಿನ ಕೈದಿಗಳು ಪರಸ್ಪರ ಹೊಡೆದಾಡಿಕೊಂಡಿದ್ದು, ಪುತ್ತೂರಿನ ಮೂಲದ ಕೈದಿ ಕೇಶವ ತೀವ್ರವಾಗಿ ಗಾಯಗೊಂಡು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಉಳ್ಳಾಲದ ಧರ್ಮನಗರದ ನಟೋರಿಯಸ್ ರೌಡಿ ಮಹಮ್ಮದ್ ಮುಖ್ತಾರ್ ಮತ್ತು ಅವನ ಸಹಚರರು, ಕೇಶವ ಎಂಬ ಕೈದಿಯ ಮೇಲೆ ಕ್ರೂರ ಹಲ್ಲೆ ನಡೆಸಿದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದ್ದು, ಎದೆ ಭಾಗದಲ್ಲಿ ಗಂಭೀರ ಗಾಯವಾಗಿದೆ ಎನ್ನಲಾಗಿದೆ.
ಕೇಶವನು 2023ರ ನವೆಂಬರ್ 6ರಂದು ಪುತ್ತೂರಿನಲ್ಲಿ ನಡೆದಿದ್ದ ಹುಲಿ ವೇಷದ ತಂಡದ ನಾಯಕ ಅಕ್ಷಯ್ ಕಲ್ಲೇಗನ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿ ಬಂಧನದಲ್ಲಿದ್ದ.
ಹಲ್ಲೆ ನಡೆಸಿದ ಮಹಮ್ಮದ್ ಮುಖ್ತಾರ್, ಸುಮಾರು 15 ಪ್ರಕರಣಗಳಲ್ಲಿ ಶಾಮೀಲಾಗಿರುವ ಅಪರಾಧಿ. 2022ರ ಜುಲೈನಲ್ಲಿ ಪೊಲೀಸರ ಗುಂಡು ಹಾರಾಟದಿಂದ ಬಂಧಿತನಾಗಿದ್ದ.
ಈ ಸಂಬಂಧ ಬರ್ಕೆ ಠಾಣೆ ಪೊಲೀಸರು ಜೈಲಿಗೆ ಭೇಟಿ ನೀಡಿ ತನಿಖೆ ಆರಂಭಿಸಿದ್ದು, ಪ್ರಕರಣ ದಾಖಲಿಸಲಾಗಿದೆ. ಕಳೆದ ಕೆಲ ತಿಂಗಳಿನಿಂದ ಈ ಜೈಲಿನಲ್ಲಿ ಕೈದಿಗಳ ನಡುವಿನ ಘರ್ಷಣೆಗಳು ಕ್ರಮೇಣ ಹೆಚ್ಚುತ್ತಲೇ ಇವೆ ಎಂಬ ಆತಂಕ ಮೂಡಿದೆ.