
ಚಂಡೀಗಢ: ಭಾರತೀಯ ಸಶಸ್ತ್ರ ಪಡೆಗಳ ಸುಪ್ರೀಂ ಕಮಾಂಡರ್ ಆಗಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬುಧವಾರ (ಅ. 29) ಹರಿಯಾಣದ ಅಂಬಾಲಾ ಏರ್‌ಬೇಸ್‌ಗೆ ತೆರಳಿ, ಅಲ್ಲಿ ರಫೇಲ್ ಫೈಟರ್ ಜೆಟ್‌ನಲ್ಲಿ ಹಾರಾಟ ನಡೆಸಲಿದ್ದಾರೆ. ಈ ಮೂಲಕ ಅವರು ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಮೊದಲ ರಾಷ್ಟ್ರಪತಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ರಾಷ್ಟ್ರಪತಿ ಮುರ್ಮು ಅವರಿಗೆ ಯುದ್ಧ ವಿಮಾನದಲ್ಲಿ ಹಾರಾಟ ನಡೆಸುತ್ತಿರುವುದು ಇದೇ ಮೊದಲಲ್ಲ. ಈ ಮೊದಲು, ಅವರು 2023ರ ಏಪ್ರಿಲ್ 8 ರಂದು ಅಸ್ಸಾಂನ ತೇಜ್‌ಪುರ ಏರ್‌ಬೇಸ್‌ನಲ್ಲಿ ಸುಖೋಯ್-30 ಯುದ್ಧ ವಿಮಾನದಲ್ಲಿ ಯಶಸ್ವಿಯಾಗಿ ಹಾರಾಟ ನಡೆಸಿದ್ದರು. ಈ ಹಿಂದೆ, ಮಾಜಿ ರಾಷ್ಟ್ರಪತಿಗಳಾದ ಶ್ರೀಮತಿ ಪ್ರತಿಭಾ ಪಾಟೀಲ್ ಮತ್ತು ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಕೂಡ ಸುಖೋಯ್-30 ಫೈಟರ್ ಜೆಟ್‌ಗಳಲ್ಲಿ ಹಾರಾಟ ನಡೆಸಿದ್ದರು.
ಅಂಬಾಲಾ ಏರ್‌ಬೇಸ್‌ನ ಮಹತ್ವ
ರಾಷ್ಟ್ರಪತಿಗಳು ಹಾರಾಟ ನಡೆಸಲು ಆಯ್ಕೆ ಮಾಡಿರುವ ಅಂಬಾಲಾ ಏರ್‌ಬೇಸ್‌ಗೆ ತನ್ನದೇ ಆದ ಐತಿಹಾಸಿಕ ಮಹತ್ವವಿದೆ. ಈ ವಾಯುನೆಲೆಯು ‘ಆಪರೇಷನ್ ಸಿಂಧೂರ’ದ ವೇಳೆ ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳ ಮೇಲೆ ಏರ್‌ಸ್ಟ್ರೈಕ್ ಮಾಡಲು ಟೇಕಾಫ್ ಆದ ನಮ್ಮ ಫೈಟರ್ ಜೆಟ್‌ಗಳಿಗೆ ನೆಲೆಯಾಗಿತ್ತು. ಈ ಐತಿಹಾಸಿಕ ನೆಲೆಯಿಂದಲೇ ರಾಷ್ಟ್ರಪತಿ ಮುರ್ಮು ಅವರು ಅತ್ಯಾಧುನಿಕ ರಫೇಲ್ ಜೆಟ್‌ನಲ್ಲಿ ಹಾರಾಟ ನಡೆಸಿ ಭಾರತೀಯ ವಾಯುಪಡೆಯ ಶಕ್ತಿ ಮತ್ತು ಸಿದ್ಧತೆಯನ್ನು ಪ್ರದರ್ಶಿಸುತ್ತಿದ್ದಾರೆ.



































