
ಪ್ರಯಾಗ್‌ರಾಜ್: ಮಹಾಕುಂಭ ಮೇಳದ ಪವಿತ್ರ ಸಂದರ್ಭದಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ (ಫೆಬ್ರವರಿ.10) ಪ್ರಯಾಗ್‌ರಾಜ್ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರು. ಬೆಳಗಿನ ಜಾವ ಪ್ರಯಾಗ್‌ರಾಜ್‌ಗೆ ಆಗಮಿಸಿದ ರಾಷ್ಟ್ರಪತಿಗಳನ್ನು ಉತ್ತರಪ್ರದೇಶದ ರಾಜ್ಯಪಾಲ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆತ್ಮೀಯವಾಗಿ ಸ್ವಾಗತಿಸಿದರು.
ಪುಣ್ಯಸ್ನಾನಕ್ಕೂ ಮೊದಲು ತ್ರಿವೇಣಿ ಸಂಗಮದ ಹಕ್ಕಿಗಳಿಗೆ ಆಹಾರ ನೀಡಿದ ರಾಷ್ಟ್ರಪತಿ, ನಂತರ ಪವಿತ್ರ ನದಿಯಲ್ಲಿ ಮುಳುಗಿ ಪುಣ್ಯಸ್ನಾನ ನಡೆಸಿದರು. ಸ್ನಾನದ ಬಳಿಕ, ಬಡೇ ಹನುಮಾನ್ ದೇವಾಲಯ ಹಾಗೂ ಅಕ್ಷಯವಟ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
(ಜನವರಿ.13) ರಂದು ಪ್ರಾರಂಭವಾದ ಮಹಾಕುಂಭ ಮೇಳ (ಫೆಬ್ರವರಿ.26) ರಂದು ಮಹಾಶಿವರಾತ್ರಿಯೊಂದಿಗೆ ಸಮಾಪನವಾಗಲಿದೆ. ಈವರೆಗೆ ಲಕ್ಷಾಂತರ ಭಕ್ತರು ತ್ರಿವೇಣಿ ಸಂಗಮದಲ್ಲಿ ಸ್ನಾನಗೈದು ಪುಣ್ಯ ಪಡೆದಿದ್ದಾರೆ.