
ಹೊಸದಿಲ್ಲಿ: “ಒಂದು ದೇಶ ಒಂದು ಚುನಾವಣೆ” ಆಡಳಿತದಲ್ಲಿ ಸ್ಥಿರತೆ ತರುತ್ತದೆ ಮತ್ತು ನೀತಿ ಗ್ರಹಣವನ್ನು ತಡೆಯುವ ಶಕ್ತಿ ಹೊಂದಿದೆ. ಜೊತೆಗೆ, ಈ ಪದ್ಧತಿ ಆರ್ಥಿಕ ಹೊರೆ ಕಡಿಮೆಯಾಗಲು ಸಹಕಾರಿ ಎಂಬುದಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.
ಗಣರಾಜ್ಯೋತ್ಸವ ಸಂದರ್ಭದಲ್ಲಿ, ಜ.25 ರಂದು ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ಆರ್ಥಿಕ ಬೆಳವಣಿಗೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಇದು ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ರೈತರು ಹಾಗೂ ಕಾರ್ಮಿಕ ವರ್ಗದವರಿಗೆ ಹೆಚ್ಚು ಹಣ ನೀಡುವ ಮೂಲಕ ಬಡತನವನ್ನು ನಿರ್ಮೂಲನೆಗೊಳಿಸಲು ಸಹಕಾರಿಯಾಗಿದೆ ಎಂದು ಅವರು ಹೇಳಿದರು.
ಇಸ್ರೋ ಸಾಧನೆಗೆ ಶ್ಲಾಘನೆ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಇತ್ತೀಚಿನ ಬಾಹ್ಯಾಕಾಶ ಡಾಕಿಂಗ್ ಸಾಧನೆ ಮೂಲಕ ದೇಶಕ್ಕೆ ಮತ್ತಷ್ಟು ಗೌರವ ತಂದಿದೆ. ಇಸ್ರೋ ಸಾಧನೆ ಮಾಡಿದ 4ನೇ ದೇಶವಾಗಿ ಭಾರತ ಸೇರಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಶ್ಲಾಘಿಸಿದರು.
ಅದೇ ಸಮಯದಲ್ಲಿ, 2024ರ ದೇಶದ ಕ್ರೀಡಾ ಸಾಧನೆ, ಪರಿಸರ ಸಂರಕ್ಷಣೆಯ ಪ್ರಯತ್ನಗಳು ಮತ್ತು ಪ್ರಸ್ತುತ ನಡೆಯುತ್ತಿರುವ ಮಹಾ ಕುಂಭಮೇಳದ ಬಗ್ಗೆ ಅವರು ಉಲ್ಲೇಖಿಸಿದರು.