
ಹೆಬ್ರಿ : ಮುದ್ರಾಡಿ ಗ್ರಾಮದ ಅತೀ ಪುರಾತನ ಬಲ್ಲಾಡಿ ಶ್ರೀ ಅರ್ಧನಾರೀಶ್ವರ ಅಬ್ಬಗ ದಾರಗ ದೇವಸ್ಥಾನ ಮತ್ತು ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಜೀರ್ಣೋದ್ದಾರ ಕುರಿತು ಪೂರ್ವಭಾವಿ ಸಭೆಯು ಮುದ್ರಾಡಿ ಸಮುದಾಯ ಭವನದಲ್ಲಿ ಜೂ. 22 ರಂದು ನಡೆಯಿತು.
ದೇವಸ್ಥಾನ ಮತ್ತು ಗರಡಿಯನ್ನು ನೂತನವಾಗಿ ನಿರ್ಮಿಸುವ ಉದ್ದೇಶದಿಂದ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮತ್ತು ಜೀರ್ಣೋದ್ದಾರ ಸಮಿತಿಗಳ ಪದಾಧಿಕಾರಿಗಳು ಜೀರ್ಣೋದ್ದಾರ ಕಾರ್ಯಗಳನ್ನು ಮಾಡುವ ಬಗ್ಗೆ ಗ್ರಾಮಸ್ಥ ರೊಂದಿಗೆ ಸಮಾಲೋಚನೆ ನಡೆಸಿದರು.
ಹಿರಿಯ ಗ್ರಾಮ ಪಂಚಾಯತ್ ಸದಸ್ಯರಾದ ಗಣಪತಿ ಎಂ. ಮಾತನಾಡಿ ಗ್ರಾಮಸ್ಥರೆಲ್ಲರೂ ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ಎಲ್ಲರೂ ಸ್ವಯಂ ಪ್ರೇರಿತರಾಗಿ ತೊಡಗಿಸಿಕೊಳ್ಳಬೇಕು. ಪ್ರಥಮವಾಗಿ ಬಾಕಿ ಉಳಿದ ಪ್ರಾಯಶ್ಚಿತ ಕಾರ್ಯವನ್ನು ಮೊದಲು ಮಾಡಿಕೊಂಡು, ವಾಸ್ತುತಜ್ಞರ ಮಾರ್ಗದರ್ಶನದಲ್ಲಿ ಮತ್ತು ತಂತ್ರಿಗಳ ನೇತೃತ್ವದಲ್ಲಿ, ಅರ್ಚಕರ ಪೂಜಾ ವಿಧಾನ ದೊಂದಿಗೆ ನಡೆಸಲಾಗುವುದು. ಆರ್ಥಿಕ ಕ್ರೋಡೀಕರಣ, ಶ್ರಮದಾನ, ಆಮಂತ್ರಣ ಪತ್ರಿಕೆ ಹಂಚಿಕೆ,ಇನ್ನಿತರ ವ್ಯವಸ್ಥೆ ಮಾಡುವ ಬಗ್ಗೆ ಗ್ರಾಮದ ವಾರ್ಡ್ ಅನುಸಾರ ತಂಡ ಮಾಡಿಕೊಂಡು ಒಬ್ಬ ನಿಷ್ಠಾವಂತ ನಾಯಕರ ಮುಂದಾಳತ್ವದಲ್ಲಿ ನಡೆಸುವುದು. ಹಾಗೂ ದಾನಿಗಳಿಂದ ದೇಣಿಗೆ ಸಂಗ್ರಹಿಸುವ ಕಾರ್ಯವಾಗ ಬೇಕು.ನಮ್ಮ ಊರಿನ ದೇವಸ್ಥಾನದ ಜೀರ್ಣೋದ್ದಾರ ಕಾರ್ಯದಲ್ಲಿ ಎಲ್ಲರೂ ಕೈ ಜೋಡಿಸಿ ಕೊನೆಯವರೆಗೂ ಭಾಗಿಗಳೋಣ ಎಂದರು.
ಸಭೆಯ ಅಧ್ಯಕ್ಷತೆಯನ್ನು ದೇವಸ್ಥಾನ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ದಿವ್ಯ ಸಾಗರ ದಿವಾಕರ ಶೆಟ್ಟಿಯವರು ವಹಿಸಿ ಮಾತನಾಡಿ ಜುಲೈ 31 ಮತ್ತು ಆಗೋಷ್ಟು 1ರಿಂದ 3 ತಾರೀಕಿನವರೆಗೆ ಪ್ರಾಯಶ್ಚಿತ, ಮುಷ್ಟಿ ಕಾಣಿಕೆ ಕಾರ್ಯಕ್ರಮವಿದೆ. ಅದರಲ್ಲಿ ಎಲ್ಲರೂ ಭಾಗವಹಿಸಿ, ಮುಂದೆ ನಡೆಯುವ ಜೀರ್ಣೋದ್ದಾರ ಕಾರ್ಯದಲ್ಲೂ ತೊಡಗಿಸಿಕೊಂಡು ನಮ್ಮ ಊರಿನ ದೇವರ ಸೇವೆ ಮಾಡುವುದರ ಮೂಲಕ ತನು ಮನ ಧನ ನೀಡಿ ದೇವರ ಕೃಪೆಗೆ ಪಾತ್ರರಾಗೋಣ ಎಂದರು.
ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶುಭಧರ ಶೆಟ್ಟಿ, ಮುದ್ರಾಡಿ ಬೆಳಗುಂಡಿ ಶ್ರೀ ಮಹಾಲಿಂಗೇಶ್ವರ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ಅಶೋಕ್ ಕುಮಾರ್ ಶೆಟ್ಟಿ, ಗರಡಿ ಮುಕ್ಕಾಲು ಶೆಟ್ರು ಜಯಕರ ಶೆಟ್ಟಿ ಬಲ್ಲಾಡಿ, ಗರಡಿ ಅರ್ಚಕರಾದ ಸಂತೋಷ ಆರ್. ಪೂಜಾರಿ ಬಲ್ಲಾಡಿ, ದೇವಸ್ಥಾನ ಅರ್ಚಕರಾದ ಶ್ರೀಶ ಭಟ್ ರವರು ಸಲಹೆ ಸೂಚನೆ ನೀಡಿ ಮಾತನಾಡಿದರು.
ಮುದ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಸಂತಿ ಪೂಜಾರಿ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಗುರು ಪ್ರಸಾದ್ ಕೊಳಂಬೆ ಉಪಸ್ಥಿತರಿದ್ದರು. ಶ್ರೀಧರ್ ಹೆಬ್ಬಾರ್ ಕಾಪೋಳಿ ಸ್ವಾಗತಿಸಿ ವಂದಿಸಿದರು. ಬಲ್ಲಾಡಿ ಚಂದ್ರಶೇಖರ ಭಟ್ ನಿರೂಪಿಸಿದರು. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.