ಪ್ರಯಾಗ್‌ರಾಜ್‌ನಲ್ಲಿ ವಿಶ್ವದ ಅತಿದೊಡ್ಡ ಧಾರ್ಮಿಕ ಜಾತ್ರೆಯಾದ ಮಹಾಕುಂಭಮೇಳಕ್ಕೆ ಇಂದು ನಸುಕಿನ ಹೊತ್ತಿನಲ್ಲಿ ಶಾಹಿ ಸ್ನಾನದ ಮೂಲಕ ಅದ್ಧೂರಿ ಚಾಲನೆ ದೊರೆಯಿತು. 144 ವರ್ಷಗಳಲ್ಲಿ ಒಂದೇ ಬಾರಿ ನಡೆಯುವ ಈ ಮಹಾಮೇಳ, ಫೆಬ್ರವರಿ 26 ರಂದು ಮಹಾಶಿವರಾತ್ರಿ ದಿನ ಕೊನೆಗೊಳ್ಳಲಿದೆ.
44 ದಿನಗಳ ಕಾಲ ನಡೆಯಲಿರುವ ಈ ಮೇಳದಲ್ಲಿ, ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿ ಲಕ್ಷಾಂತರ ಭಕ್ತರು ಪುಣ್ಯ ಸ್ನಾನ ಮಾಡುವ ನಿರೀಕ್ಷೆ ಇದೆ. ಮೊದಲ ದಿನವೇ ಸಾವಿರಾರು ನಾಗಸಾಧುಗಳು ಮತ್ತು ಭಕ್ತರು ಶಾಹಿ ಸ್ನಾನದಲ್ಲಿ ಭಾಗವಹಿಸಿ ಸಂಭ್ರಮವನ್ನೇರಿಸಿದ್ದಾರೆ.
45 ಕೋಟಿಗೂ ಹೆಚ್ಚು ಜನರ ಹಾಜರಾತಿ ನಿರೀಕ್ಷೆ
ಮೇಳದಲ್ಲಿ 45 ಕೋಟಿಗೂ ಹೆಚ್ಚು ಭಕ್ತರು ಭಾಗವಹಿಸುವ ನಿರೀಕ್ಷೆಯಿದ್ದು, ಈ ದೈವೀ ಆಚರಣೆಗೆ ಉತ್ತರ ಪ್ರದೇಶ ಸರ್ಕಾರದಿಂದ ದಿಟ್ಟ ತಯಾರಿ ಕೈಗೊಳ್ಳಲಾಗಿದೆ. ನದಿಯ ಉದ್ದಕ್ಕೂ 12 ಕಿಲೋಮೀಟರ್ ವ್ಯಾಪ್ತಿಯ ಘಾಟ್‌ಗಳನ್ನು ನಿರ್ಮಿಸಲಾಗಿದೆ. ಸುಗಮ ಸ್ನಾನ ಮತ್ತು ಭಕ್ತರ ಸುರಕ್ಷತೆಗಾಗಿ ವಿಶೇಷ ಕ್ರಮ ಕೈಗೊಳ್ಳಲಾಗಿದೆ.
ಅತ್ಯಾಧುನಿಕ ವ್ಯವಸ್ಥೆ ಮತ್ತು ಕಠಿಣ ಭದ್ರತೆ
ಮೇಳದ ಅವಧಿಯಲ್ಲಿ ಯಾವುದೇ ಅನಾಹುತಗಳು ನಡೆಯದಂತೆ 800 ಪ್ರಾದೇಶಿಕ ಸಶಸ್ತ್ರ ಕಾನ್ಸ್‌ಟೇಬಲ್‌ಗಳು, 150 ಎಸ್‌ಡಿಆರ್‌ಎಫ್ ಸಿಬ್ಬಂದಿ ಮತ್ತು ಎನ್‌ಡಿಆರ್‌ಎಫ್ ತಂಡ ನಿಯೋಜನೆಗೊಂಡಿದೆ. ಇದೇ ಮೊದಲ ಬಾರಿಗೆ ನದಿಯ ಮೇಲೆಯೇ ಆಧುನಿಕ ಐಸಿಯು ಅಂಬ್ಯುಲೆನ್ಸ್‌ಗಳನ್ನು ಸ್ಥಾಪಿಸಲಾಗಿದೆ, ಇದರಲ್ಲಿ ಆಮ್ಲಜನಕ, ವೆಂಟಿಲೇಟರ್, ವೈದ್ಯಕೀಯ ಸಿಬ್ಬಂದಿ, ಮತ್ತು ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ.
ಮಹಾಶಿವರಾತ್ರಿ ಮುಖ್ಯ ಆಕರ್ಷಣೆಯಾಗಿ
ಈ ಮಹಾಕುಂಭ ಮೇಳ, ಫೆಬ್ರವರಿ 26ರ ಮಹಾಶಿವರಾತ್ರಿ ದಿನ ಅಂತಿಮ ಶಾಹಿ ಸ್ನಾನದೊಂದಿಗೆ ಸಮಾಪ್ತಿಯಾಗಲಿದ್ದು, ಧಾರ್ಮಿಕ ಮಹತ್ವದ ಮೂಲಕ ಭಕ್ತರ ಮನಸೂರೆಗೊಳ್ಳುತ್ತಿದೆ.