
ಪ್ರಯಾಗ್ ರಾಜ್: ಕುಂಭಮೇಳಕ್ಕೆ ಭಕ್ತಾದಿಗಳನ್ನು ಕರೆದೊಯ್ಯುತ್ತಿದ್ದ ಕಾರೊಂದು ಬಸ್ಸಿಗೆ ಢಿಕ್ಕಿ ಹೊಡೆದ ಪರಿಣಾಮ ಕನಿಷ್ಠ 10 ಜನರು ಮೃತಪಟ್ಟಿದ್ದಾರೆ. ಈ ಘಟನೆ ಶುಕ್ರವಾರ ತಡರಾತ್ರಿ ಪ್ರಯಾಗ್ ರಾಜ್-ಮಿರ್ಝಾಪುರ್ ಹೆದ್ದಾರಿಯಲ್ಲಿ ಮೇಜಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಛತ್ತೀಸ್‌ಗಢದಿಂದ ಕುಂಭಮೇಳಕ್ಕೆ ಹೋಗುತ್ತಿದ್ದ ಭಕ್ತಾದಿಗಳನ್ನು ಕರೆದೊಯ್ಯುತ್ತಿದ್ದ ಕಾರು ಹಠಾತ್ ಬಸ್ಸಿಗೆ ಢಿಕ್ಕಿ ಹೊಡೆದು ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಸಾವನ್ನಪ್ಪಿದವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ವರೂಪ್ ರಾಣಿ ವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಯಮುನಾನಗರ ಉಪ ಪೊಲೀಸ್ ಆಯುಕ್ತ ವಿವೇಕ್ ಚಂದ್ರ ಯಾದವ್ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಘಟನೆಗೆ ಸಂತಾಪ ಸೂಚಿದರು. ಅಲ್ಲದೆ, ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ಒದಗಿಸುವಂತೆ ಮತ್ತು ಪರಿಹಾರ ಕಾರ್ಯಗಳನ್ನು ವೇಗಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಈ ಅಪಘಾತ ರಸ್ತೆ ಸುರಕ್ಷತೆ ಕುರಿತು ಮತ್ತೊಮ್ಮೆ ಪ್ರಶ್ನೆಗಳನ್ನು ಎಬ್ಬಿಸಿದೆ. ಪೊಲೀಸರು ಘಟನೆಯ ಕಾರಣಗಳನ್ನು ತನಿಖೆ ಮಾಡುತ್ತಿದ್ದಾರೆ.