
ಪುತ್ತೂರು: ವಿವಾಹದ ಭರವಸೆ ನೀಡಿ ಯುವತಿಯನ್ನು ನಂಬಿಸಿ ವಂಚಿಸಿದ ಆರೋಪ ಹೊತ್ತಿರುವ ಶ್ರೀಕೃಷ್ಣ ರಾವ್ ಪ್ರಕರಣದಲ್ಲಿ, ಸಂತ್ರಸ್ತ ಯುವತಿಗೆ ನ್ಯಾಯ ಕೊಡಿಸಲು ಮುಂದಾಗಿದ್ದ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಅವರಿಗೆ ಪುತ್ತೂರು ನಗರ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಪ್ರಕರಣದ ಹಿನ್ನೆಲೆ:
ಈ ಹಿಂದೆ ಪುತ್ತೂರಿನ ಬಿಜೆಪಿ ಮುಖಂಡ ಪಿ.ಜಿ. ಜಗನ್ನಿವಾಸ ರಾವ್ ಅವರ ಪುತ್ರ ಶ್ರೀಕೃಷ್ಣ ರಾವ್ ವಿರುದ್ಧ ಯುವತಿಯೊಬ್ಬಳು ಗಂಭೀರ ವಂಚನೆಯ ಆರೋಪ ಮಾಡಿದ್ದರು. ಈ ಪ್ರಕರಣದಲ್ಲಿ ಯುವತಿಯು ಮಗುವಿಗೆ ಜನ್ಮ ನೀಡಿದ್ದು, ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಪ್ರತಿಭಾ ಕುಳಾಯಿ ಅವರು ಈ ಸಂತ್ರಸ್ತೆಯ ಪರವಾಗಿ ನಿಂತು, ಸಾರ್ವಜನಿಕವಾಗಿ ಧ್ವನಿ ಎತ್ತಿದ್ದರು.
ನೋಟಿಸ್‌ಗೆ ಕಾರಣವೇನು?
ಶ್ರೀಕೃಷ್ಣ ರಾವ್ ಅವರ ತಂದೆ ಪಿ.ಜಿ. ಜಗನ್ನಿವಾಸ ರಾವ್ ಅವರು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ (SP) ಪ್ರತಿಭಾ ಕುಳಾಯಿ ಅವರ ವಿರುದ್ಧ ದೂರು ನೀಡಿದ್ದರು. ಈ ದೂರನ್ನು ಹೆಚ್ಚಿನ ತನಿಖೆಗಾಗಿ ಪುತ್ತೂರು ನಗರ ಠಾಣೆಗೆ ವರ್ಗಾಯಿಸಲಾಗಿದ್ದು, ಅದರಂತೆ ತನಿಖಾಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಪ್ರತಿಭಾ ಅವರಿಗೆ ಸೂಚಿಸಿದ್ದಾರೆ.
ಪ್ರತಿಭಾ ಕುಳಾಯಿ ಅವರ ಪ್ರತಿಕ್ರಿಯೆ:
ಪೊಲೀಸ್ ನೋಟಿಸ್ ಬಗ್ಗೆ ಪ್ರತಿಕ್ರಿಯಿಸಿರುವ ಪ್ರತಿಭಾ ಕುಳಾಯಿ, “ಈ ಹಿಂದೆಯೂ ಜಗನ್ನಿವಾಸ ರಾವ್ ನನ್ನ ವಿರುದ್ಧ ಇಂತಹ ಹಲವಾರು ಸುಳ್ಳು ದೂರುಗಳನ್ನು ನೀಡಿದ್ದಾರೆ. ಇಂತಹ ಬೆದರಿಕೆಗಳಿಗೆ ನಾನು ಎದರುವುದಿಲ್ಲ. ಸಂತ್ರಸ್ತೆಯ ಮಗುವಿಗೆ 2026ರ ಫೆಬ್ರವರಿ 15 ಅಥವಾ 16ರಂದು ಕಲ್ಲಡ್ಕದಲ್ಲಿ ನಾಮಕರಣ ಸಮಾರಂಭ ನಡೆಸಲು ಸಿದ್ಧತೆ ನಡೆಸುತ್ತಿದ್ದೇವೆ,” ಎಂದು ಸ್ಪಷ್ಟಪಡಿಸಿದ್ದಾರೆ.



































