
ಮೂಡುಬಿದಿರೆಯಲ್ಲಿ ಪ್ರಸಾದ್ ನೇತ್ರಾಲಯದ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯು ಮಾರ್ಚ್ 16ರಂದು ಬೆಳಿಗ್ಗೆ ಜೈನಪೇಟೆ ಬಡಗ ಬಸದಿ ಎದುರು ಇರುವ ಫಾರ್ಚೂನ್-2 ಕಟ್ಟಡದ ಮೊದಲ ಮಹಡಿಯಲ್ಲಿ ಉದ್ಘಾಟನೆಗೊಳ್ಳಲಿದೆ. ಪ್ರಸಾದ್ ನೇತ್ರಾಲಯ ಸಮೂಹ ಆಸ್ಪತ್ರೆಗಳ ವೈದ್ಯಕೀಯ ನಿರ್ದೇಶಕರಾದ ಡಾ.ಕೃಷ್ಣಪ್ರಸಾದ್ ಕೂಡ್ಲು ಅವರು ಈ ಕುರಿತು ಮಾಹಿತಿ ನೀಡಿದ್ದಾರೆ.
2002ರಲ್ಲಿ ಉಡುಪಿಯಲ್ಲಿ ಪ್ರಾರಂಭಗೊಂಡ ಪ್ರಸಾದ್ ನೇತ್ರಾಲಯವು ಮಂಗಳೂರು, ಸುಳ್ಯ, ತೀರ್ಥಹಳ್ಳಿ, ಶಿವಮೊಗ್ಗ, ಗೋವಾ, ಪುತ್ತೂರು ಹಾಗೂ ಕಾಸರಗೋಡಿನಲ್ಲಿ ತನ್ನ ಸೇವಾ ಕೇಂದ್ರಗಳನ್ನು ಹೊಂದಿದ್ದು, ಇದೀಗ ಮೂಡುಬಿದಿರೆಯಲ್ಲಿ ಸೇವೆಗೆ ಮುಂದಾಗಿದೆ.
ಈ ಆಸ್ಪತ್ರೆಯಲ್ಲಿ ಕಣ್ಣಿನ ಪೊರೆ, ರೆಟಿನಾ, ಗ್ಲಾಕೋಮಾ, ಮೆಳ್ಳೆಗಣ್ಣು, ಮಕ್ಕಳ ಕಣ್ಣಿನ ಚಿಕಿತ್ಸೆ, ಲೇಸರ್ ಚಿಕಿತ್ಸೆಯಂತಹ ಆಧುನಿಕ ಸೇವೆಗಳು ಲಭ್ಯವಿದ್ದು, ವಿಶ್ವದರ್ಜೆಯ ನವೀನ ತಂತ್ರಜ್ಞಾನದ ರೋಬೋಟಿಕ್ ಕಣ್ಣಿನ ಪೊರೆ ಚಿಕಿತ್ಸೆಯೂ ಒದಗಿಸಲಾಗುತ್ತದೆ.
ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಆಶೀರ್ವದಿಸಲಿದ್ದು, ಡಾ. ಮೋಹನ ಆಳ್ವ ಅವರು ಉದ್ಘಾಟಿಸಲಿದ್ದಾರೆ. ಶಾಸಕ ಉಮಾನಾಥ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಮಾಜಿ ಶಾಸಕ ಕೆ.ಅಭಯಚಂದ್ರ, ಪುರಸಭಾಧ್ಯಕ್ಷೆ ಜಯಶ್ರೀ ಕೇಶವ್, ಪಿ.ಕೆ.ಥೋಮಸ್ ಮತ್ತು ಮಹೇಂದ್ರವರ್ಮ ಜೈನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಳೆದ 23 ವರ್ಷಗಳಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಕಣ್ಣಿನ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ನಡೆಸಿದ್ದು, 40 ಸಾವಿರಕ್ಕೂ ಹೆಚ್ಚು ಉಚಿತ ಶಿಬಿರಗಳನ್ನು ಆಯೋಜಿಸಲಾಗಿದೆ. ಸಮಾಜದ ಎಲ್ಲಾ ವರ್ಗದ ಜನರಿಗೆ ಪ್ರಯೋಜನವಾಗುವಂತೆ ಈ ಸೇವೆಗಳನ್ನು ವಿಸ್ತರಿಸಲಾಗಿದೆ ಎಂದು ಡಾ.ಕೃಷ್ಣಪ್ರಸಾದ್ ತಿಳಿಸಿದರು.