
ಬೆಂಗಳೂರು: ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ‘ಧುರಂಧರ್ 2’ ಚಿತ್ರದ ಕುರಿತು ಸ್ಯಾಂಡಲ್‌ವುಡ್‌ನ ಹಿರಿಯ ನಟ ಪ್ರಕಾಶ್ ರಾಜ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದಿತ್ಯ ಧರ್ ನಿರ್ದೇಶನದ ಈ ಬೇಹುಗಾರಿಕಾ ಥ್ರಿಲ್ಲರ್ ಚಿತ್ರವನ್ನು ದಕ್ಷಿಣ ಭಾರತದ ಖ್ಯಾತ ನಟರು ಮುಕ್ತಕಂಠದಿಂದ ಶ್ಲಾಘಿಸಿರುವುದನ್ನು ಟೀಕಿಸಿರುವ ಅವರು, ಇದು ದಕ್ಷಿಣಕ್ಕೂ ಹರಡುತ್ತಿರುವ ರಾಜಕೀಯ ಹಂಗಿನ ಮುನ್ಸೂಚನೆ ಎಂದು ಪರೋಕ್ಷವಾಗಿ ಕಿಡಿಕಾರಿದ್ದಾರೆ.
ಚಿತ್ರವನ್ನು ಶ್ಲಾಘಿಸಿದ್ದ ತೆಲುಗು ಚಿತ್ರರಂಗದ ಸ್ಟಾರ್ ನಟರಾದ ಅಲ್ಲು ಅರ್ಜುನ್, ಜೂನಿಯರ್ ಎನ್‌ಟಿಆರ್, ಮಹೇಶ್ ಬಾಬು ಮತ್ತು ರಾಮ್ ಚರಣ್ ಅವರನ್ನು ಗುರಿಯಾಗಿಸಿಕೊಂಡು ಪ್ರಕಾಶ್ ರಾಜ್ ಎಕ್ಸ್ (ಟ್ವಿಟರ್) ಮೂಲಕ ಕಿಡಿಕಾರಿದ್ದಾರೆ. “ಯಾವುದೇ ಬಾಲಿವುಡ್ ತಾರೆ ಈ ಬಗ್ಗೆ ಟ್ವೀಟ್ ಮಾಡಿದ್ದಾರೆಯೇ? ಆದರೆ ಹಂಗಿನ ಚಿಹ್ನೆಗಳು ಇದೀಗ ದಕ್ಷಿಣಕ್ಕೂ ಹರಡುತ್ತಿವೆ” ಎಂದು ಬರೆಯುವ ಮೂಲಕ ಚಿತ್ರದ ಪರ ನಿಂತವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದಲ್ಲದೆ, ಹಳೆಯ ಹಿಂದಿ ಚಿತ್ರದ ಹಾಡೊಂದನ್ನು ಹಂಚಿಕೊಳ್ಳುತ್ತಾ, “ನಾನು ಧುರಂಧರ್‌ನಿಂದ ಬಹು ದೂರ.. ನೀವು?” ಎಂದು ಪ್ರಶ್ನಿಸುವ ಮೂಲಕ ಚಿತ್ರದ ಸಿದ್ಧಾಂತದಿಂದ ತಾವು ದೂರವಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಈ ವಿವಾದಕ್ಕೆ ಯೂಟ್ಯೂಬರ್ ಧ್ರುವ್ ರಾಠಿ ಮತ್ತು ನಟಿ ರಮ್ಯಾ ಅವರ ಹೇಳಿಕೆಗಳು ಮತ್ತಷ್ಟು ತುಪ್ಪ ಸುರಿದಿವೆ. ನಿರ್ದೇಶಕ ಆದಿತ್ಯ ಧರ್ ಅವರನ್ನು ‘ಬಿಜೆಪಿ ಪ್ರಚಾರಕ’ ಎಂದು ಧ್ರುವ್ ರಾಠಿ ಟೀಕಿಸಿದ್ದರೆ, ರಮ್ಯಾ ಅವರ ವಿರೋಧಕ್ಕೂ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗಳು ವ್ಯಕ್ತವಾಗಿವೆ. ಒಟ್ಟಾರೆ, ‘ಧುರಂಧರ್ 2’ ಸಿನಿಮಾ ಕೇವಲ ಮನರಂಜನೆಯಾಗಿ ಉಳಿಯದೆ ದೊಡ್ಡ ಮಟ್ಟದ ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡಿದೆ.



































