
ಹಾಸನ : ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದೆ. ಮಾಜಿ ಸಂಸದರಾಗಿರುವ ಪ್ರಜ್ವಲ್ ರೇವಣ್ಣ, ಹೊಳೆನರಸೀಪುರದ ತಮ್ಮ ಮನೆಗೆಲಸದ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆಂಬ ಆರೋಪ ಎದುರಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಇತ್ಯರ್ಥಗೊಳಿಸಿದೆ.
ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಈ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ (ವಿಚಾರಣಾಧೀನ ನ್ಯಾಯಾಲಯ) ಸಲ್ಲಿಸುವಂತೆ ಸೂಚನೆ ನೀಡಿದೆ. ಅಷ್ಟೇ ಅಲ್ಲದೆ, ಪ್ರಜ್ವಲ್ ರೇವಣ್ಣ ಸಲ್ಲಿಸುವ ಜಾಮೀನು ಅರ್ಜಿಯನ್ನು 10 ದಿನಗಳೊಳಗೆ ಇತ್ಯರ್ಥಪಡಿಸುವಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.
ಹೈಕೋರ್ಟ್‌ನ ಈ ನಿರ್ದೇಶನ ಪ್ರಜ್ವಲ್ ರೇವಣ್ಣಗೆ ಸಣ್ಣಮಟ್ಟಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ. ಯಾಕೆಂದರೆ, ಅವರ ಜಾಮೀನು ಅರ್ಜಿ ವಿಚಾರಣೆ ಪದೇ ಪದೇ ಮುಂದೂಡಲ್ಪಡುತ್ತಿತ್ತು. ಇದೀಗ 10 ದಿನಗಳಲ್ಲಿಯೇ ತೀರ್ಮಾನ ಕೈಗೊಳ್ಳಲು ಸೂಚಿಸಿರುವುದರಿಂದ, ಪ್ರಜ್ವಲ್ ರೇವಣ್ಣಗೆ ಜಾಮೀನು ಸಿಗುವ ಭರವಸೆ ಮೂಡಿದೆ. ಮುಂದಿನ ಹತ್ತು ದಿನಗಳಲ್ಲಿ ಜಾಮೀನು ಸಿಗುತ್ತದೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಲಿದೆ.
ಕಳೆದ ವರ್ಷ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್‌ಗಳು ಹಾಸನದಲ್ಲಿ ಭಾರೀ ಸಂಚಲನ ಮೂಡಿಸಿದ್ದವು. ಈ ಘಟನೆಯ ಬಳಿಕ ಪ್ರಜ್ವಲ್ ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದರು. ಅಂತಿಮವಾಗಿ ಸ್ವತಃ ವಾಪಸಾದ ಪ್ರಜ್ವಲ್ ಪೊಲೀಸರಿಗೆ ಶರಣಾಗಿ ವಿಚಾರಣೆಗೆ ಒಳಪಟ್ಟಿದ್ದರು.