
ಲಕ್ನೋ : ಭವಿಷ್ಯದ ಪ್ರಧಾನಿಯಾಗುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, “ರಾಜಕೀಯ ನನ್ನ ಪೂರ್ಣಾವಧಿಯ ವೃತ್ತಿ ಅಲ್ಲ, ನಾನು ಹೃದಯದಲ್ಲಿ ಸದಾ ಯೋಗಿಯೇ” ಎಂದು ಸ್ಪಷ್ಟಪಡಿಸಿದ್ದಾರೆ.
ಸುದ್ದಿಸಂಸ್ಥೆಯೊಂದರೊಂದಿಗೆ ಮಾತನಾಡಿದ ಯೋಗಿ ಆದಿತ್ಯನಾಥ್, “ನಾನು ಈ ಕ್ಷಣದಲ್ಲಿ ಉತ್ತರ ಪ್ರದೇಶದ ಜನತೆಗೆ ಸೇವೆ ಸಲ್ಲಿಸುವ ಜವಾಬ್ದಾರಿಯಲ್ಲಿದ್ದೇನೆ. ಪಕ್ಷ ನೀಡಿದ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ. ಭವಿಷ್ಯದ ಪ್ರಧಾನಿ ಹುದ್ದೆ ಬಗ್ಗೆ ನಾನು ಚಿಂತಿಸುತ್ತಿಲ್ಲ” ಎಂದು ಹೇಳಿದರು.
ಕೇಂದ್ರದೊಂದಿಗೆ ಭಿನ್ನಾಭಿಪ್ರಾಯವಿಲ್ಲ
ಕೇಂದ್ರ ಬಿಜೆಪಿ ನಾಯಕರೊಂದಿಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ತಳ್ಳಿ ಹಾಕಿದ ಯೋಗಿ, “ಹೀಗೊಂದು ಭಿನ್ನಾಭಿಪ್ರಾಯ ಇದ್ದರೆ, ಈ ಸ್ಥಾನದಲ್ಲಿ ನಾನು ಇರಬಹುದೇ? ಆದರೆ, ವದಂತಿಗಳನ್ನು ತಡೆಗಟ್ಟಲು ನಾನು ಹೋಗುವುದಿಲ್ಲ” ಎಂದು ಹೇಳಿದರು.
“ಕೆಲವರಿಗಷ್ಟೇ ರಾಜಕೀಯ, ಕೆಲವರಿಗಷ್ಟೇ ಧರ್ಮ – ಇದರಿಂದಲೇ ಸಮಸ್ಯೆ”
ರಾಜಕೀಯ ಮತ್ತು ಧರ್ಮದ ಸಂಬಂಧ ಕುರಿತಾಗಿ ಮಾತನಾಡಿದ ಅವರು, “ನಾವು ಕೆಲ ಜನರಿಗೆ ಮಾತ್ರ ರಾಜಕೀಯ, ಕೆಲವರಿಗಷ್ಟೇ ಧರ್ಮ ಮೀಸಲಾಗಿಟ್ಟಿರುವುದರಿಂದ ಸಮಸ್ಯೆ ಹುಟ್ಟಿದೆ. ಸ್ವಹಿತಕ್ಕಾಗಿ ನಡೆಯುವ ರಾಜಕೀಯ ಸಮಸ್ಯೆ ತರುತ್ತದೆ, ಆದರೆ ಸಮಸ್ತ ಜನರಿಗಾಗಿ ನಡೆಯುವ ರಾಜಕೀಯ ಸಮಸ್ಯೆಗಳನ್ನು ಪರಿಹರಿಸುತ್ತದೆ. ಇದನ್ನೇ ಧರ್ಮವೂ ಕಲಿಸುತ್ತದೆ” ಎಂದು ವಿವರಿಸಿದರು.
ಉತ್ತರ ಪ್ರದೇಶದಲ್ಲಿ ಕನ್ನಡ-ತಮಿಳು ಕಲಿಕೆ
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಹಿಂದೂ ವಿರೋಧಿ ನಿಲುವನ್ನು ಖಂಡಿಸಿದ ಯೋಗಿ, “ಉತ್ತರ ಪ್ರದೇಶದಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಮರಾಠಿ ಭಾಷೆ ಕಲಿಸಲಾಗುತ್ತಿದೆ. ಇದರಿಂದ ನಾವು ಚಿಕ್ಕವರಾಗುವುದಿಲ್ಲ. ಭಾಷಾ ವಿವಾದವನ್ನು ಕೆಲ ರಾಜಕೀಯ ಹಿತಾಸಕ್ತಿಯ ವ್ಯಕ್ತಿಗಳು ಕೇವಲ ತಮ್ಮ ಲಾಭಕ್ಕಾಗಿ ಉದ್ದೇಶಪೂರ್ವಕವಾಗಿ ಸೃಷ್ಟಿಸುತ್ತಿದ್ದಾರೆ” ಎಂದು ಆರೋಪಿಸಿದರು.
ಈ ಕುರಿತು ಆರೆಸ್ಸೆಸ್ ಮತ್ತು ಹಿಂದೂತ್ವ ಪರ ಸಂಘಟನೆಗಳು ಕೂಡ ಯೋಗಿ ಆದಿತ್ಯನಾಥ್ ಅವರ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿವೆ.