
ಮೈಸೂರು : ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಬಟ್ಟೆ ವ್ಯಾಪಾರಿಯೊಬ್ಬರಿಗೆ ಹನಿಟ್ರ್ಯಾಪ್ ಬಲೆ ಬೀಸಿ ಹಣಕ್ಕೆ ಬೇಡಿಕೆ ಇಟ್ಟ ಅಪರಾಧಿಗಳ ಗುಂಪು ಪತ್ತೆಯಾಗಿದ್ದು, ಅವರ ಬಂಧನದ ಮೂಲಕ ಈ ಸುದ್ದಿಯು ಚರ್ಚೆಯ ವಿಷಯವಾಗಿದೆ. ಎಚ್ಚರ ಮೂಡಿಸುವ ಈ ಪ್ರಕರಣದಲ್ಲಿ ಒಂದಕ್ಕಿಂತ ಹೆಚ್ಚು ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿದ್ದು, ಆರೋಪಿಗಳಲ್ಲಿ ಒಬ್ಬನು ಪೊಲೀಸ್ ಸಿಬ್ಬಂದಿಯಾಗಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಬಟ್ಟೆ ವ್ಯಾಪಾರಿ ದಿನೇಶ್ ಎಂಬವರು ವಾಟ್ಸ್ಆಪ್‌ನಲ್ಲಿ ಒಬ್ಬ ಯುವತಿಯಿಂದ ನಿರಂತರವಾಗಿ ಬಂದ ‘ಕಲರ್-ಕಲರ್’ ಮೆಸೇಜ್‌ಗಳಿಂದ ಪ್ರಭಾವಿತರಾಗಿ ಆಕೆಯ ಮನೆಗೆ ಭೇಟಿ ನೀಡಿದಾಗ ಘಟನೆಯ ಆರಂಭವಾಗಿದೆ. ಮನೆಯೊಳಗೆ ಒಳನಡೆದ ತಕ್ಷಣ ಯುವತಿಯು ಬಾಗಿಲು ಲಾಕ್ ಮಾಡಿದ್ದಾಳೆ. ಆಗಲೇ ಪ್ಲಾನ್ ಪ್ರಕಾರ ಇಬ್ಬರು ಸದಸ್ಯರು ಬಾಗಿಲು ಒಡೆದು ರೂಂಗೆ ನುಗ್ಗಿ ದಿನೇಶ್ ಅವರನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ.
ಘಟನೆಯ ನಂತರ, ಯುವತಿ ಮತ್ತು ಅವಳ ಗ್ಯಾಂಗ್ ದಿನೇಶ್‌ನಿಂದ ಯುವತಿಯ ರಕ್ಷಣೆ ಹೆಸರಿನಲ್ಲಿ ₹10 ಲಕ್ಷ ಬೇಡಿಕೆ ಇಟ್ಟಿದ್ದಾರೆ. ಈ ಎಲ್ಲ ಕೃತ್ಯಗಳು ಮುಂಚಿತವಾಗಿ ರೂಪಿಸಿದ ಪ್ಲಾನ್‌ನ ಭಾಗವಾಗಿದ್ದು, ಪೊಲೀಸರ ಕಾರ್ಯಚರಣೆ ನಂತರ ಎಲ್ಲಾ ಸಂಗತಿಗಳು ಬಯಲಾಗಿವೆ.
ಪಿರಿಯಾಪಟ್ಟಣ ಠಾಣೆ ಪೊಲೀಸರು ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿ ಆರೋಪಿಗಳಾದ ಎ1 ಮೂರ್ತಿ, ಎ2 ಶಿವಣ್ಣ (ಪೋಲೀಸ್ ಸಿಬ್ಬಂದಿ) ಮತ್ತು ಇನ್ನೂ ಮೂರು ಜನರನ್ನು ಬಂಧಿಸಿದ್ದಾರೆ. ಹನಿಟ್ರ್ಯಾಪ್ ಪ್ರಕರಣದಲ್ಲಿ ಖುದ್ದು ಪೊಲೀಸ್ ಸಿಬ್ಬಂದಿಯೇ ಭಾಗಿಯಾಗಿರುವುದು ಪೋಲೀಸ್ ಇಲಾಖೆಯು ತಲೆ ತಗ್ಗಿಸುವಂತೆ ಮಾಡಿದೆ.
ಸ್ಥಳೀಯರು ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ. ಪೊಲೀಸ್ ಇಲಾಖೆ ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇನ್ನಷ್ಟು ಆರೋಪಿಗಳ ಪತ್ತೆಗೆ ಚುರುಕು ಕ್ರಮ ಕೈಗೊಂಡಿದೆ.