
ಮೂಡುಬಿದಿರೆ : ಪೊಲೀಸ್ ಠಾಣೆಗೆ ದೂರು ನೀಡಲು ಬಂದ ಮಹಿಳೆಯೊಬ್ಬರಿಗೆ ಅಶ್ಲೀಲವಾಗಿ ಕರೆ ಮಾಡಿ ಕಿರುಕುಳ ನೀಡಿದ ಆರೋಪದ ಮೇಲೆ ಪೊಲೀಸ್ ಸಿಬ್ಬಂದಿಯೊಬ್ಬರನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ. ಕರ್ತವ್ಯ ಲೋಪ ಹಾಗೂ ಮಹಿಳೆಯ ಗೌರವಕ್ಕೆ ಧಕ್ಕೆ ತಂದಿರುವ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.
ಪ್ರಕರಣದ ವಿವರ
ಮಧ್ಯವಯಸ್ಸಿನ ಮಹಿಳೆಯೊಬ್ಬರು ತಮ್ಮ ದಾಂಪತ್ಯ ಕಲಹದ ಕುರಿತು ದೂರು ನೀಡಲು ಇತ್ತೀಚೆಗೆ ಮೂಡುಬಿದಿರೆ ಠಾಣೆಗೆ ಬಂದಿದ್ದರು. ಠಾಣೆಯ ಇನ್‌ಸ್ಪೆಕ್ಟರ್ ಸಂದೇಶ್ ಪಿ.ಜಿ. ಅವರು ಮಹಿಳೆ ಮತ್ತು ಅವರ ಪತಿಗೆ ಬುದ್ಧಿವಾದ ಹೇಳಿ ರಾಜಿ ಸಂಧಾನ ಮಾಡಿಸಿ ಕಳುಹಿಸಿಕೊಟ್ಟಿದ್ದರು.
ಆದರೆ, ಇದೇ ಸಮಯದಲ್ಲಿ ಠಾಣೆಯ ಮುಂಭಾಗದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಶಾಂತಪ್ಪ (28) ಭೇಟಿ ಪುಸ್ತಕದಲ್ಲಿ ಮಹಿಳೆಯ ಮೊಬೈಲ್ ಸಂಖ್ಯೆಯನ್ನು ದಾಖಲಿಸಿಕೊಂಡಿದ್ದಾನೆ. ಬಳಿಕ, ಮಹಿಳೆ ಠಾಣೆಯಿಂದ ಹೊರಟು ಹೋದ ನಂತರ ಶಾಂತಪ್ಪ ತನ್ನನ್ನು ಪರಿಚಯಿಸಿಕೊಂಡು ಅವಿವಾಹಿತ ಎಂದು ಹೇಳಿಕೊಂಡಿದ್ದಾನೆ. ಆಗಸ್ಟ್ 25 ರಿಂದ ಸೆಪ್ಟೆಂಬರ್ 1 ರವರೆಗೆ ಆತ ಮಹಿಳೆಗೆ ನಿರಂತರವಾಗಿ ಕರೆ ಮತ್ತು ಮೆಸೇಜ್‌ಗಳನ್ನು ಮಾಡಿ ಅಶ್ಲೀಲವಾಗಿ ಮಾತನಾಡಿದ್ದಲ್ಲದೆ, ತನ್ನೊಂದಿಗೆ ಬರುವಂತೆ ಒತ್ತಾಯಿಸಿದ್ದಾನೆ.

ಶಾಂತಪ್ಪನ ಕಿರುಕುಳದಿಂದ ಬೇಸತ್ತ ಮಹಿಳೆ, ಸೆಪ್ಟೆಂಬರ್ 1 ರಂದು ಪೊಲೀಸ್ ಠಾಣೆಗೆ ಮರಳಿ ಬಂದು ಕಾಲ್ ರೆಕಾರ್ಡಿಂಗ್ ಸಮೇತ ಶಾಂತಪ್ಪನ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣದ ಗಂಭೀರತೆಯನ್ನು ಅರಿತ ಇನ್‌ಸ್ಪೆಕ್ಟರ್ ಸಂದೇಶ್ ತಕ್ಷಣ ತನಿಖೆ ನಡೆಸಿ ಆರೋಪಿ ಶಾಂತಪ್ಪನನ್ನು ಬಂಧಿಸಿದ್ದಾರೆ.
ಇಲಾಖೆಯ ಕ್ರಮ
ಕಾನೂನು ಪಾಲಕರೇ ಇಂತಹ ಅನೈತಿಕ ಕೃತ್ಯ ಎಸಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಶಿಸ್ತು ಕ್ರಮ ಜರುಗಿಸಿರುವ ಪೊಲೀಸ್ ಇಲಾಖೆ, ಆರೋಪಿ ಶಾಂತಪ್ಪನನ್ನು ಸೇವೆಯಿಂದ ಅಮಾನತುಗೊಳಿಸಿದೆ. ಪ್ರಕರಣದ ಕುರಿತು ಹೆಚ್ಚಿನ ವಿಚಾರಣೆ ನಡೆಸಿದ ನಂತರ ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.