
ಬೆಳ್ತಂಗಡಿ: ಧರ್ಮಸ್ಥಳದ ಸೌಜನ್ಯಾ ಪ್ರಕರಣದ ಪರ ಹೋರಾಟಗಾರರು, ಪೊಲೀಸರು ಅನುಮತಿ ನಿರಾಕರಿಸಿದ್ದರೂ ಅಕ್ಟೋಬರ್ 27 ರಂದು ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರು ಗುಂಪು ಸೇರಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ ಆರೋಪದಲ್ಲಿ, ಸೌಜನ್ಯಾ ತಾಯಿ ಕುಸುಮಾವತಿ ಸೇರಿದಂತೆ 20ಕ್ಕೂ ಅಧಿಕ ಮಂದಿಯ ವಿರುದ್ಧ ಬೆಳ್ತಂಗಡಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣ ದಾಖಲಿಗೆ ಕಾರಣವೇನು?
ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಸೌಜನ್ಯಾ ಪರ ಹೋರಾಟಗಾರರ ವಿರುದ್ಧ ಪೊಲೀಸರು ಸುಳ್ಳು ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟನಾಕಾರರು ತಹಶೀಲ್ದಾರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲು ಮುಂದಾಗಿದ್ದರು.
- ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧದ ಗಡಿಪಾರು ಆದೇಶದ ಬಗ್ಗೆ ಹೈಕೋರ್ಟ್‌ನಲ್ಲಿ ತೀರ್ಪು ಬಾಕಿಯಿರುವ ಕಾರಣ, ಪೊಲೀಸ್ ಇಲಾಖೆ ಮನವಿ ಸಲ್ಲಿಸಲು/ಪ್ರತಿಭಟನೆ ನಡೆಸಲು ಅನುಮತಿ ನಿರಾಕರಿಸಿತ್ತು.
- ಅನುಮತಿ ನಿರಾಕರಿಸಿದ್ದರೂ ಅ. 27 ರಂದು ಹಲವರು ಮಿನಿ ವಿಧಾನ ಸೌಧದ ರಸ್ತೆ ಮತ್ತು ಎದುರು ಅಕ್ರಮ ಕೂಟ ಸೇರಿ ಪೊಲೀಸರ ಸೂಚನೆಯನ್ನು ನಿರ್ಲಕ್ಷಿಸಿದರು.
ಬೆಳ್ತಂಗಡಿ ಎಎಸ್ಸೆ ದುರ್ಗಾದಾಸ್ ಅವರು ನೀಡಿರುವ ದೂರಿನ ಅನ್ವಯ, ಸೌಜನ್ಯಾ ತಾಯಿ ಕುಸುಮಾವತಿ, ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಅನಿಲ್ ಕುಮಾರ್ ಅಂತರ, ಪ್ರಜ್ವಲ್ ಗೌಡ, ಪ್ರದೀಪ್ ಕುಲಾಲ್, ಶ್ರೀನಿವಾಸ ಗೌಡ, ರವೀಂದ್ರ ಶೆಟ್ಟಿ, ಟಿಕ್ಕಿ ರವಿ ಸೇರಿದಂತೆ 20ಕ್ಕೂ ಹೆಚ್ಚು ಮಂದಿಯ ವಿರುದ್ಧ ಬಿ.ಎನ್.ಎಸ್. 189(2), 190, 285, 57 ಕರ್ನಾಟಕ ಪೊಲೀಸ್ ಆಕ್ಟ್ 1963, 31(0), 103(ii) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.



































