
ಕೊಲ್ಲಂ (ಕೇರಳ): ಪೋಕ್ಸೋ ಪ್ರಕರಣವೊಂದರಲ್ಲಿ ನ್ಯಾಯಾಲಯವು ಶಿಕ್ಷೆಯ ಪ್ರಮಾಣ ಪ್ರಕಟಿಸುತ್ತಿದ್ದಂತೆಯೇ ಜೈಲು ಕಟಕಟೆಯಲ್ಲಿದ್ದ ಅಪರಾಧಿಯೊಬ್ಬ ಸಿನಿಮೀಯ ರೀತಿಯಲ್ಲಿ ಪರಾರಿಯಾಗಿರುವ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ. ಅಸ್ಸಾಂ ಮೂಲದ ಶಾಲಾ ಬಾಲಕಿಯನ್ನು ಅಪಹರಿಸಿ ನಿರಂತರ ಅತ್ಯಾಚಾರ ಎಸಗಿದ್ದ ಸಿರಾಜುಲ್ ಹಕ್ ಎಂಬಾತನೇ ಪೊಲೀಸರ ಕಣ್ಣುತಪ್ಪಿಸಿ ಪರಾರಿಯಾದ ದೋಷಿ. ಕರುನಾಗಪಲ್ಲಿಯ ಪೋಕ್ಸೋ ತ್ವರಿತಗತಿ ನ್ಯಾಯಾಲಯವು ಈತನಿಗೆ 23 ವರ್ಷಗಳ ಸುದೀರ್ಘ ಜೈಲು ಶಿಕ್ಷೆ ಮತ್ತು 2,10,000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡುವ ಸಂದರ್ಭದಲ್ಲೇ ಈ ಘಟನೆ ಸಂಭವಿಸಿದೆ.
ಮೈನಾಂಗಪಲ್ಲಿಯ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಸಿರಾಜುಲ್ ಹಕ್, ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಆಕೆ ತನ್ನ ಪತ್ನಿ ಎಂದು ಸುಳ್ಳು ಹೇಳಿ ದೌರ್ಜನ್ಯ ಎಸಗಿದ್ದನು. ಬಾಲಕಿಯ ಪೋಷಕರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಈತನನ್ನು ಶಾಸ್ತಾಂಕೋಟ ಪೊಲೀಸರು ಬಂಧಿಸಿದ್ದರು. ಜಾಮೀನಿನ ಮೇಲೆ ಹೊರಬಂದಿದ್ದ ಈತನನ್ನು ವಿಚಾರಣೆಗಾಗಿ ಪೊಲೀಸರು ಕೋರ್ಟ್‌ಗೆ ಕರೆತಂದಿದ್ದರು. ನ್ಯಾಯಾಧೀಶರು ತೀರ್ಪು ಓದುತ್ತಿದ್ದಾಗ ಎಲ್ಲರ ಗಮನ ನ್ಯಾಯಪೀಠದ ಕಡೆ ಇದ್ದದ್ದನ್ನು ಬಳಸಿಕೊಂಡ ಅಪರಾಧಿ, ಕ್ಷಣಾರ್ಧದಲ್ಲಿ ನ್ಯಾಯಾಲಯದ ಆವರಣದಿಂದ ನಾಪತ್ತೆಯಾಗಿದ್ದಾನೆ. ಪೊಲೀಸರು ತಮ್ಮ ತನಿಖೆಗೆ ಜಯ ಸಿಕ್ಕಿತು ಎಂದು ಸಂಭ್ರಮಿಸುವಷ್ಟರಲ್ಲೇ ಅಪರಾಧಿ ಕೈಕೊಟ್ಟಿದ್ದು, ಸದ್ಯ ಪೊಲೀಸರು ಆತನಿಗಾಗಿ ಬಲೆ ಬೀಸಿದ್ದಾರೆ.



































