
ಜೈಪುರ: ಆಪರೇಷನ್ ಸಿಂದೂರ ಕಾರ್ಯಾಚರಣೆ ಬಳಿಕ ಮೊದಲಬಾರಿಗೆ ಪಾಕಿಸ್ತಾನದ ಗಡಿಗೆ ಸಮೀಪವಿರುವ ರಾಜಸ್ಥಾನದ ಬಿಕಾನೇರ್ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿದ್ದಾರೆ. ಪ್ರಧಾನಮಂತ್ರಿ ಕಚೇರಿ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ.
ಈ ಭೇಟಿಯ ಅಂಗವಾಗಿ ಮೋದಿ ಅವರು ಬಿಕಾನೇರ್‌ನ ನಾಲ್ ವಾಯುನೆಲೆಗೆ ಭೇಟಿ ನೀಡಲಿದ್ದಾರೆ. ನಂತರ, ದೇಶ್ನೋಕ್‌ನಲ್ಲಿ ₹26,000 ಕೋಟಿ ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸಲಿದ್ದಾರೆ.ಇದೇ ವೇಳೆ ಪ್ರಧಾನಿ ಮೋದಿ ಕರ್ಣಿ ಮಾತಾ ದೇಗುಲಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ.
ಅಲ್ಲದೇ ಅಮೃತ ಭಾರತ ನಿಲ್ದಾಣ ಯೋಜನೆಯಡಿಯಲ್ಲಿ ಪುನರಾಭಿವೃದ್ಧಿಗೊಂಡ ದೇಶ್ನೋಕ್ ರೈಲ್ವೆ ನಿಲ್ದಾಣವನ್ನು ಉದ್ಘಾಟಿಸಿ, ಬಳಿಕ ಸಾರ್ವಜನಿಕರನ್ನುದ್ದೇಶಿಸಿ ಭಾಷಣ ಮಾಡುವ ನಿರೀಕ್ಷೆಯಿದೆ. ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿರುವ ಈ ಪ್ರವಾಸ ರಾಜಸ್ಥಾನದಲ್ಲಿ ಮಹತ್ವದ ರಾಜಕೀಯ ಹಾಗೂ ಅಭಿವೃದ್ಧಿ ಚಟುವಟಿಕೆಗೆ ಸಾಕ್ಷಿಯಾಗಲಿದೆ.