
ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಶನಿವಾರದಿಂದ ಒಂದು ತಿಂಗಳ ಕಾಲ ಆಯೋಜಿಸಲಾಗಿರುವ ಬೃಹತ್ ಗೀತೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.
ಮೋದಿ ಆಗಮನದ ವಿವರಗಳು: ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 28 ರಂದು ಮಧ್ಯಾಹ್ನ 12 ಗಂಟೆಗೆ ಕೃಷ್ಣಮಠಕ್ಕೆ ಆಗಮಿಸಲಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ, ಸುಮಾರು ₹2.50 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಚಿನ್ನದ ಹೊದಿಕೆಯ ಸುವರ್ಣ ತೀರ್ಥ ಮಂಟಪ ಮತ್ತು ಕನಕನ ಕಿಂಡಿಯನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.
ಇದಾದ ನಂತರ, ‘ಲಕ್ಷ ಕಂಠ ಗೀತಾ’ ಎಂಬ ಬೃಹತ್ ಸಾಮೂಹಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಭಗವದ್ಗೀತೆ ಪಠಣ ಮಾಡುತ್ತಿರುವ ಒಂದು ಲಕ್ಷ ಭಕ್ತರೊಂದಿಗೆ ಗೀತೆಯ ಕೊನೆಯ 10 ಶ್ಲೋಕಗಳನ್ನು ಪಠಣ ಮಾಡಲಿದ್ದಾರೆ. ಈ ಗಾಯನಕ್ಕಾಗಿ ಮಠದ ಬಳಿಯ ವಿಶಾಲ ಗದ್ದೆಯಲ್ಲಿ ವ್ಯವಸ್ಥೆ ಮಾಡಲಾಗಿದೆ.
ಯೋಗಿ ಆದಿತ್ಯನಾಥ್ ಭಾಗಿ: ಗೀತೋತ್ಸವದ ಅಂಗವಾಗಿ ನವೆಂಬರ್ 30 ರಂದು ಸಂತ ಸಂಗಮ ಮತ್ತು ಭಜನೋತ್ಸವ ಕಾರ್ಯಕ್ರಮಗಳು ನಡೆಯಲಿವೆ. ಈ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡಾ ಭಾಗವಹಿಸಲಿದ್ದು, ನಾಡಿನ ವಿವಿಧ ಮಠಾಧಿಪತಿಗಳು ಪಾಲ್ಗೊಳ್ಳಲಿದ್ದಾರೆ. ಅಂದು ಮಧ್ಯಾಹ್ನ 3 ಗಂಟೆಗೆ ವೈಭವದ ಶೋಭಾ ಯಾತ್ರೆ ಮತ್ತು ಸಂಜೆ 4 ಗಂಟೆಗೆ ಸಾಮೂಹಿಕ ಭಜನೋತ್ಸವ ನಡೆಯಲಿದೆ ಎಂದು ಶ್ರೀಗಳು ಮಾಹಿತಿ ನೀಡಿದ್ದಾರೆ.
ಗೀತೋತ್ಸವವನ್ನು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ.



































