
ಹೊಸದಿಲ್ಲಿ: ಸ್ವತಂತ್ರ ಭಾರತದ ಆಡಳಿತಾತ್ಮಕ ಇತಿಹಾಸದಲ್ಲಿ ಇಂದು ಸುವರ್ಣಾಕ್ಷರಗಳಲ್ಲಿ ಬರೆಯುವ ದಿನ. ಕೇಂದ್ರ ಸರ್ಕಾರದ ಪ್ರತಿಷ್ಠಿತ ‘ಸೆಂಟ್ರಲ್ ವಿಸ್ಟಾ’ ಯೋಜನೆಯ ಮೈಲಿಗಲ್ಲಾದ, ಪ್ರಧಾನ ಮಂತ್ರಿಗಳ ನೂತನ ಕಾರ್ಯಾಲಯವನ್ನೊಳಗೊಂಡ ಭವ್ಯ ‘ಸೇವಾ ತೀರ್ಥ’ ಸಂಕೀರ್ಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಲೋಕಾರ್ಪಣೆ ಮಾಡಲಿದ್ದಾರೆ. 1947 ರ ನಂತರ ಇದೇ ಮೊದಲ ಬಾರಿಗೆ ಪ್ರಧಾನಿ ಕಚೇರಿಯು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಹೊಸ ವಿಳಾಸಕ್ಕೆ ಸ್ಥಳಾಂತರಗೊಳ್ಳುತ್ತಿದೆ.
ಇಂದು ಮಧ್ಯಾಹ್ನ 1:30 ಕ್ಕೆ ಪ್ರಧಾನಿಗಳು ಈ ನೂತನ ಸಂಕೀರ್ಣಕ್ಕೆ ‘ಸೇವಾ ತೀರ್ಥ’ ಎಂದು ಹೆಸರಿಸುವ ಮೂಲಕ ನಾಮಫಲಕ ಅನಾವರಣಗೊಳಿಸಲಿದ್ದಾರೆ. ಬಳಿಕ ಸಂಜೆ 6 ಗಂಟೆಗೆ ನಡೆಯುವ ಅದ್ಧೂರಿ ಸಮಾರಂಭದಲ್ಲಿ ಸಂಕೀರ್ಣವನ್ನು ಉದ್ಘಾಟಿಸಿ, ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಸಂಕೀರ್ಣವು ಕೇವಲ ಕಟ್ಟಡವಲ್ಲ, ಬದಲಿಗೆ ಆಡಳಿತದಲ್ಲಿ ವೇಗ ಮತ್ತು ಪಾರದರ್ಶಕತೆ ತರುವ ಶಕ್ತಿ ಕೇಂದ್ರವಾಗಿ ಹೊರಹೊಮ್ಮಲಿದೆ. ಇಲ್ಲಿ ಪ್ರಧಾನಿ ಕಚೇರಿ (PMO) ಮಾತ್ರವಲ್ಲದೆ, ಕ್ಯಾಬಿನೆಟ್ ಸಚಿವಾಲಯ, ಕರ್ತವ್ಯ ಭವನ ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿಯ ಕಚೇರಿಗಳು ಒಂದೇ ಸೂರಿನಡಿ ಕಾರ್ಯನಿರ್ವಹಿಸಲಿವೆ.
‘ಸೇವಾ ತೀರ್ಥ’ ಸಂಕೀರ್ಣವನ್ನು ಮೂರು ಪ್ರಮುಖ ವಿಭಾಗಗಳಾಗಿ ವಿಂಗಡಿಸಲಾಗಿದೆ.
‘ಸೇವಾ ತೀರ್ಥ-1’ ಪ್ರಧಾನ ಮಂತ್ರಿಗಳ ಕಚೇರಿಯಾಗಿದ್ದರೆ, ‘ಸೇವಾ ತೀರ್ಥ-2’ ಕ್ಯಾಬಿನೆಟ್ ಸಚಿವಾಲಯಕ್ಕೆ ಮೀಸಲಾಗಿದೆ.‘ಸೇವಾ ತೀರ್ಥ-3’ ರಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರ ಕಾರ್ಯಾಲಯ ಕಾರ್ಯನಿರ್ವಹಿಸಲಿದೆ. ಈವರೆಗೆ ಬೇರೆ ಬೇರೆ ಕಡೆ ಹಂಚಿಹೋಗಿದ್ದ ಆಡಳಿತಾತ್ಮಕ ವಿಭಾಗಗಳು ಈಗ ಒಂದೇ ಕಡೆ ಸಮನ್ವಯಗೊಳ್ಳುತ್ತಿರುವುದು ನವ ಭಾರತದ ಆಡಳಿತಾತ್ಮಕ ಸುಧಾರಣೆಗೆ ಹಿಡಿದ ಕೈಗನ್ನಡಿಯಾಗಿದೆ.



































