
ಬೆಂಗಳೂರು : ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣದಲ್ಲಿ ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದ ಮೂವರು ಐಪಿಎಸ್ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಸ್ಥಳ ನಿಯೋಜನೆ ಮಾಡಿ ಆದೇಶ ಹೊರಡಿಸಿದೆ. ಈ ಪೈಕಿ ಮಾಜಿ ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರಿಗೆ ಮಹತ್ವದ ಜವಾಬ್ದಾರಿ ವಹಿಸಲಾಗಿದೆ.
ಮೂವರು ಐಪಿಎಸ್ ಅಧಿಕಾರಿಗಳಿಗೆ ಹೊಸ ಹುದ್ದೆಗಳ ನಿಯೋಜನೆ
ಆರ್.ಸಿ.ಬಿ ವಿಜಯೋತ್ಸವದ ವೇಳೆ ಸಂಭವಿಸಿದ ದುರಂತದಲ್ಲಿ 11 ಅಭಿಮಾನಿಗಳು ಸಾವನ್ನಪ್ಪಿದ ಬಳಿಕ, ಈ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು. ಇದೀಗ ಅಮಾನತು ಆದೇಶ ರದ್ದುಗೊಂಡ ನಂತರ ಅವರಿಗೆ ಈ ಕೆಳಗಿನಂತೆ ಹೊಸ ಹುದ್ದೆಗಳನ್ನು ನೀಡಲಾಗಿದೆ:
- ಬಿ. ದಯಾನಂದ್: ಎಡಿಜಿಪಿ, ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ
- ಶೇಖರ್ ಎಚ್. ಟೆಕ್ಕಣ್ಣವರ್: ಪೊಲೀಸ್ ಅಧೀಕ್ಷಕರು, ಗುಪ್ತಚರ ವಿಭಾಗ
- ವಿಕಾಸ್ ಕುಮಾರ್: ಐಜಿಪಿ, ಆಂತರಿಕ ಭದ್ರತಾ ವಿಭಾಗ
ಬಿ. ದಯಾನಂದ್ ಅವರಿಗೆ ಉನ್ನತ ಜವಾಬ್ದಾರಿ
ಈ ಹಿಂದೆ ಬೆಂಗಳೂರು ಪೊಲೀಸ್ ಕಮಿಷನರ್ ಆಗಿದ್ದಾಗ ಬಿ. ದಯಾನಂದ್ ಅವರ ಮೇಲೆ ಮಹಾನಿರ್ದೇಶಕರು (ಡಿಜಿಪಿ) ಇದ್ದರು. ಆದರೆ, ಕಾರಾಗೃಹ ಮತ್ತು ಸುಧಾರಣಾ ಇಲಾಖೆಯ ಎಡಿಜಿಪಿ ಹುದ್ದೆಯಲ್ಲಿ ಅವರಿಗೆ ಯಾವುದೇ ಮೇಲಾಧಿಕಾರಿ ಇರುವುದಿಲ್ಲ. ಈ ಇಲಾಖೆಗೆ ಅವರೇ ಮುಖ್ಯಸ್ಥರಾಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಬಿ. ದಯಾನಂದ್ ಅವರಿಗೆ ಅತ್ಯಂತ ಹಿರಿಯ ಮತ್ತು ದೊಡ್ಡ ಜವಾಬ್ದಾರಿ ನೀಡಲಾಗಿದೆ ಎಂದು ಪರಿಗಣಿಸಲಾಗಿದೆ.