
ಪೇಶಾವರ ಪಾಕಿಸ್ತಾನ: ಶನಿವಾರ ಸಂಜೆ ಬಜೌರ್ ಜಿಲ್ಲೆಯ ಖಾರ್ ತೆಹ್ಸಿಲ್‌ನಲ್ಲಿರುವ ಕೌಸರ್ ಕ್ರಿಕೆಟ್ ಮೈದಾನದಲ್ಲಿ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, ಪಂದ್ಯ ನಡೆಯುತ್ತಿದ್ದಾಗ ಮೈದಾನದಲ್ಲಿ ಅಳವಡಿಸಲಾಗಿದ್ದ ಸುಧಾರಿತ ಸ್ಫೋಟಕ ಸಾಧನ (IED) ಸ್ಫೋಟಗೊಂಡಿದ್ದು, ಇದರ ಪರಿಣಾಮವಾಗಿ ಗಂಭೀರ ಅನಾಹುತ ಸಂಭವಿಸಿದೆ.
ಬಜೌರ್ ಜಿಲ್ಲಾ ಪೊಲೀಸ್ ಅಧಿಕಾರಿ ವಕಾಸ್ ರಫೀಕ್ ಅವರು ಘಟನೆಯನ್ನು ದೃಢಪಡಿಸಿದ್ದು, ಇದು ಭಯೋತ್ಪಾದಕರ ಕೃತ್ಯವಾಗಿರಬಹುದು ಎಂದು ಶಂಕಿಸಲಾಗಿದೆ. ಈ ಸ್ಫೋಟದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಮಕ್ಕಳು ಸೇರಿದಂತೆ ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತಕ್ಷಣವೇ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಳೆದ ಕೆಲವು ವಾರಗಳಿಂದ ಭದ್ರತಾ ಪಡೆಗಳು ‘ಆಪರೇಷನ್ ಸರ್ಬಕಾಫ್’ ಎಂಬ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ನಡೆಸುತ್ತಿದ್ದು, ಇದಕ್ಕೆ ಪ್ರತಿಕಾರವಾಗಿ ಈ ದಾಳಿ ನಡೆದಿರಬಹುದು ಎಂದು ಭದ್ರತಾ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಭೀತಿಯನ್ನುಂಟು ಮಾಡಿದ್ದು, ಭದ್ರತಾ ಏಜೆನ್ಸಿಗಳು ತನಿಖೆಯನ್ನು ತೀವ್ರಗೊಳಿಸಿವೆ. ಈ ಸ್ಫೋಟವು ಕ್ರೀಡಾ ಚಟುವಟಿಕೆಗಳ ಮೇಲಿನ ಭಯೋತ್ಪಾದಕ ದಾಳಿಯ ಮತ್ತೊಂದು ಉದಾಹರಣೆಯಾಗಿದೆ.