
ಮಂಗಳೂರು: ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಗಡಿಪಾರು ಮಾಡಿರುವುದನ್ನು ಖಂಡಿಸಿ ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆ ನಡೆಸಲು ಮುಂದಾಗಿದ್ದ ಪ್ರತಿಭಟನೆಗೆ ಅನುಮತಿ ನಿರಾಕರಿಸಲಾಗಿದೆ.
ಪುತ್ತೂರು ಸಹಾಯಕ ಆಯುಕ್ತರಾದ ಸ್ಟೆಲ್ಲಾ ವರ್ಗೀಸ್ ಅವರು ಮಹೇಶ್ ತಿಮರೋಡಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರಿನ ಮಾನ್ವಿಗೆ ಒಂದು ವರ್ಷದ ಅವಧಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದರು.
ಗಡಿಪಾರು ಆದೇಶದ ವಿರುದ್ಧ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಬೆಳ್ತಂಗಡಿ ಅಧ್ಯಕ್ಷ ಅನಿಲ್ ಕುಮಾರ್ ಅಂತರ ಅವರು ಸೆಪ್ಟೆಂಬರ್ 29ರಂದು ಬೆಳ್ತಂಗಡಿ ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಅವರು ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದಾರೆ.
ಪ್ರತಿಭಟನೆಯಿಂದ ಸಾರ್ವಜನಿಕ ಶಾಂತಿಗೆ ಭಂಗವುಂಟಾಗಿ, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇರುವುದರಿಂದ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ ಎಂದು ತಹಶೀಲ್ದಾರ್ ಸ್ಪಷ್ಟಪಡಿಸಿದ್ದಾರೆ.



































