
ಉಡುಪಿ: ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದ ನಗಾರಿ ಗೋಪುರವನ್ನು ಮರುನಿರ್ಮಾಣ ಮಾಡುವ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ಜುಲೈ 13 ರಂದು ಇಂದು ಶಿಲಾನ್ಯಾಸ ನಡೆಯುತ್ತಿದೆ. ಭಕ್ತಾದಿಗಳು ಯಾವುದೇ ರಾಜಕೀಯ ಉದ್ದೇಶಗಳನ್ನು ಬದಿಗಿಟ್ಟು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಮೋದ್ ರೈ ಪಳಜೆ ಮನವಿ ಮಾಡಿದ್ದಾರೆ.
ದೇವಸ್ಥಾನದ ನಗಾರಿ ಉಪ್ಪರಿಗೆಯು ಶಿಥಿಲಾವಸ್ಥೆಯಲ್ಲಿದ್ದ ಕಾರಣ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಹಾಗೂ ಭಕ್ತರ ಕೋರಿಕೆಯ ಮೇರೆಗೆ ಸಮಿತಿಯು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿತ್ತು. ಲೋಕೋಪಯೋಗಿ ಇಲಾಖೆಯು ಈ ಕಟ್ಟಡ ಬಳಕೆಗೆ ಯೋಗ್ಯವಲ್ಲ ಎಂದು ವರದಿ ನೀಡಿತ್ತು. ಈ ವರದಿ ಆಧಾರದ ಮೇಲೆ, ಜಿಲ್ಲಾಧಿಕಾರಿಗಳ ಆದೇಶದಂತೆ ಭಕ್ತರ ಸಹಕಾರದೊಂದಿಗೆ ನಗಾರಿ ಗೋಪುರವನ್ನು ತೆರವುಗೊಳಿಸಲಾಗಿತ್ತು. ಈಗ ನಗಾರಿ ಗೋಪುರದ ಮರುನಿರ್ಮಾಣಕ್ಕೆ ಅಗತ್ಯ ವಿನ್ಯಾಸವನ್ನು ತಯಾರಿಸಿ, ಇಲಾಖೆಯ ಅನುಮತಿ ಪಡೆದು ಇಂದು ಶಿಲಾನ್ಯಾಸ ನಡೆಯುತ್ತಿದೆ.
ಈ ನಡುವೆ, ಜೂನ್ 30 ರಂದು ಸುರೇಶ್ ಸೇರ್ವೆಗಾರ್, ಲಾಲಾಜಿ ಮೆಂಡನ್, ಕುಯಿಲಾಡಿ ಸುರೇಶ್ ನಾಯಕ್, ಮಟ್ಟಾರು ರತ್ನಾಕರ ಹೆಗ್ಡೆ, ಜಿಯಾನಂದ ಹೆಗ್ಡೆ, ವಿದ್ಯಾಧರ ಶೆಟ್ಟಿ, ಸುಧಾಕರ ಶೆಟ್ಟಿ, ದೇವು ಪೂಜಾರಿ, ಶಂಭು ಶಂಕರ ಶೆಟ್ಟಿ ಇವರು ಜಿಲ್ಲಾಧಿಕಾರಿಗಳ ಆದೇಶ ಮತ್ತು ಜುಲೈ 13 ರ ಕಾರ್ಯಕ್ರಮಕ್ಕೆ ತಡೆ ನೀಡುವಂತೆ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಇದರ ಪರಿಣಾಮವಾಗಿ, ನ್ಯಾಯಾಲಯವು ತಾತ್ಕಾಲಿಕವಾಗಿ ಯಥಾಸ್ಥಿತಿ ಕಾಪಾಡುವಂತೆ ಆದೇಶ ಹೊರಡಿಸಿತ್ತು. ಈ ಆದೇಶವನ್ನು ರದ್ದುಗೊಳಿಸುವಂತೆ ದೇವಸ್ಥಾನದ ಸಮಿತಿಯು ವಕೀಲ ಬಿಪಿನ್ ಹೆಗ್ಡೆ ಮೂಲಕ ಉಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದೆ.
ಜುಲೈ 8 ರಂದು ನ್ಯಾಯಾಲಯವು ಮಧ್ಯಂತರ ಆದೇಶ ನೀಡಿ, ಭಕ್ತರೆಲ್ಲರೂ ಸೇರಿ ಶಿಲಾನ್ಯಾಸ ಕಾರ್ಯಕ್ರಮವನ್ನು ನಡೆಸಲು ಅನುಮತಿ ನೀಡಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.