
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆ (ಎಲ್‌ಒಸಿ) ಹಾಗೂ ಅಂತರರಾಷ್ಟ್ರೀಯ ಗಡಿಯಲ್ಲಿ ಕಳೆದ ಮೂರು ವಾರಗಳಿಂದ ಕಾಣಿಸದೆ ಹೋಗಿದ್ದ ಶಾಂತಿ ಮತ್ತೆ ನೆಲೆಸಿದ್ದು, ಭಾನುವಾರ ಮತ್ತು ಸೋಮವಾರ ಮಧ್ಯರಾತ್ರಿ ಯಾವುದೇ ಗುಂಡಿನ ದಾಳಿ ಅಥವಾ ಶೆಲ್ ದಾಳಿ ನಡೆಯದೆ ಶಾಂತಿಪೂರ್ಣವಾಗಿ ಕಳೆಯಿತು ಎಂದು ಭಾರತೀಯ ಸೇನೆ ವರದಿ ಮಾಡಿದೆ.
ಮೇ 11ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಡಿಜಿಎಂಒ ಮಟ್ಟದ ಮಾತುಕತೆ ಬಳಿಕ ಕದನ ವಿರಾಮದ ಒಪ್ಪಂದಕ್ಕೆ ಬರಲಾಯಿತು. ಈ ಒಪ್ಪಂದದ ಬೆನ್ನಲ್ಲೇ ಗಡಿಭಾಗದಲ್ಲಿ ಮೊದಲ ಬಾರಿಗೆ ಶಾಂತಿ ಮರುಸ್ಥಾಪನೆಯಾಗಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ.
ಏಪ್ರಿಲ್ 22ರಂದು ಜಮ್ಮು-ಕಾಶ್ಮೀರದ ಪಹಲ್ಲಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಗಡಿಭಾಗದಲ್ಲಿ ಉದ್ವಿಗ್ನತೆ ಹೆಚ್ಚಾಗಿತ್ತು. ಏಪ್ರಿಲ್ 23ರಿಂದ ಮೇ 6ರ ವರೆಗೆ ಎಲ್‌ಒಸಿ ಮತ್ತು ಗಡಿಯಲ್ಲಿ ಸಣ್ಣ ಶಸ್ತ್ರಾಸ್ತ್ರಗಳಿಂದ ಗುಂಡಿನ ದಾಳಿ ನಡೆದಿತ್ತು. ಮೇ 7ರಿಂದ 11ರ ವರೆಗೆ ಪಾಕ್ ಸೇನೆಯಿಂದ ಭಾರೀ ಶೆಲ್ ದಾಳಿಗಳು ಹಾಗೂ ಕೆಲವೆಡೆ ವೈಮಾನಿಕ ದಾಳಿಗಳೂ ನಡೆದವು. ಇದರಿಂದ ಗಡಿಗೆ ಸುತ್ತಲಿನ ಗ್ರಾಮಗಳ ನಿವಾಸಿಗಳು ಭೀತಿಗೊಳಗಾಗಿ ಬಂಕರ್‌ಗಳು ಮತ್ತು ಸುರಕ್ಷಿತ ಪ್ರದೇಶಗಳಲ್ಲಿ ಆಶ್ರಯ ಪಡೆದಿದ್ದರು.
ಸುರನ್‌ಕೋಟ್ ಸೇರಿ ಹಲವೆಡೆ ಶೆಲ್ ದಾಳಿಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದ ಸಂದರ್ಭದಲ್ಲಿ, ಶನಿವಾರದ ನಂತರ ಮೊದಲ ಬಾರಿಗೆ ಗುಂಡಿನ ಸದ್ದು ಇಲ್ಲದೆ ಶಾಂತಿಯುತ ವಾತಾವರಣ ನಿರ್ಮಾಣವಾಗಿದೆ. “ಜಮ್ಮು ಮತ್ತು ಕಾಶ್ಮೀರ ಮತ್ತು ಇತರ ಗಡಿಭಾಗಗಳಲ್ಲಿ ರಾತ್ರಿ ಪೂರಾ ಶಾಂತಿಯುತವಾಗಿದ್ದು, ಇತ್ತೀಚಿನ ಉದ್ವಿಗ್ನ ದಿನಗಳಲ್ಲೇ ಇದೇ ಮೊದಲ ಬಾರಿಗೆ ಸಂಪೂರ್ಣ ಶಾಂತ ರಾತ್ರಿ ಕಂಡಿದೆ” ಎಂದು ಸೇನೆ ತಿಳಿಸಿದೆ.