
ಉಡುಪಿ : ಪರ್ಕಳದ ಕೆನರಾ ಬ್ಯಾಂಕ್ ಸಮೀಪದ ತಿರುವಿನಲ್ಲಿ ಇಂದು ಮುಂಜಾನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾರು ಚಾಲಕರೊಬ್ಬರು ಗಾಯಗೊಂಡ ಘಟನೆ ವರದಿಯಾಗಿದೆ.
ಪರ್ಕಳ ಪರಿಸರದಲ್ಲಿ ಇಂದು ಬೆಳಗ್ಗಿನ ಜಾವ ಅತಿಯಾದ ಮಂಜು ಕವಿದಿತ್ತು. ಹಿರಿಯಡಕ ಕಡೆಯಿಂದ ಉಡುಪಿ ಕಡೆಗೆ ವೇಗವಾಗಿ ಬರುತ್ತಿದ್ದ ಕಾರಿನ ಚಾಲಕನಿಗೆ ಮಂಜಿನ ಕಾರಣದಿಂದ ರಸ್ತೆಯ ತಿರುವು ಸರಿಯಾಗಿ ಗೋಚರಿಸಿಲ್ಲ. ಈ ವೇಳೆ ನಿಯಂತ್ರಣ ತಪ್ಪಿದ ಕಾರು ರಸ್ತೆಯ ಬಲಬದಿಗೆ ನುಗ್ಗಿ, ಎದುರಿನಿಂದ ಬರುತ್ತಿದ್ದ ಟೆಂಪೋ ಟ್ರಾವೆಲರ್ (TT) ವಾಹನಕ್ಕೆ ಬಲವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಗೊಳಗಾದ ಟಿಟಿ ವಾಹನದಲ್ಲಿ ತೆಲಂಗಾಣ ಮೂಲದ ಅಯ್ಯಪ್ಪ ಮಾಲೆಧಾರಿಗಳು ಪ್ರಯಾಣಿಸುತ್ತಿದ್ದರು. ಅವರು ಉಡುಪಿಯಿಂದ ಧರ್ಮಸ್ಥಳದ ಕಡೆಗೆ ತೆರಳುತ್ತಿದ್ದರು ಎನ್ನಲಾಗಿದ್ದು, ಅದೃಷ್ಟವಶಾತ್ ವಾಹನದಲ್ಲಿದ್ದ ಭಕ್ತರೆಲ್ಲರೂ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.
ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಗಾಯಗೊಂಡ ಕಾರು ಚಾಲಕನನ್ನು ತಕ್ಷಣವೇ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಂಜು ಕವಿದ ಸಮಯದಲ್ಲಿ ಚಾಲಕರು ಹೆಚ್ಚಿನ ಜಾಗರೂಕತೆ ವಹಿಸಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.



































