
ಹೆಬ್ರಿ: ಸಾಧಿಸಲು ಅಸಾಧ್ಯವಾದುದು ಯಾವುದು ಇಲ್ಲ. ಸ್ಪಷ್ಟ ಕನಸು, ಸತತ ಪ್ರಯತ್ನವಿದ್ದಾಗ ಗುರಿಯನ್ನು ಸಾಧಿಸಲು ಸಾಧ್ಯ. ಮಾನವ ಜನ್ಮ ಶ್ರೇಷ್ಠವಾದವಾದುದು. ನಾವು ಪಡೆಯುವ ವಿದ್ಯೆ ಕೇವಲ ಅಂಕ ಗಳಿಕೆಗೆ ಮಾತ್ರ ಸೀಮಿತವಾಗಬಾರದು. ಬಾಲ್ಯದಿಂದಲೇ ಬದುಕುವ ಶಿಕ್ಷಣವನ್ನು ಪಡೆದುಕೊಳ್ಳಬೇಕು. ಹೆತ್ತ ತಂದೆ ತಾಯಿಯನ್ನು, ಕಲಿಸಿದ ಗುರುಗಳನ್ನು ಮತ್ತು ಶಾಲೆಗೆ ಗೌರವ ಕೊಡುವುದನ್ನು ಎಂದೂ ಮರೆಯದಿರಿ. ಹೆತ್ತವರು ಕೂಡ ಮಕ್ಕಳಿಗಾಗಿ ತ್ಯಾಗ ಮಾಡಿ , ನಿಮ್ಮ ದಿನದ ಸ್ವಲ್ಪ ಸಮಯವನ್ನು ಮಕ್ಕಳೊಂದಿಗೆ ಕಳೆಯಿರಿ. ಮಕ್ಕಳು ಅಡ್ಡ ದಾರಿ ಹಿಡಿಯದೆ, ದುಶ್ಚಟಗಳಿಗೆ ಬಲಿಯಾಗದೆ ಸುಂದರವಾಗಿ ಬದುಕಲು ಮಾರ್ಗದರ್ಶನ ನೀಡಿ. ಧನಾತ್ಮಕ ಚಿಂತನೆ, ಯೋಚನೆ ಮತ್ತು ಯೋಜನೆಗಳು ಮನುಷ್ಯನನ್ನು ಪರಿಪೂರ್ಣಗೊಳಿಸುತ್ತವೆ ಎಂದು ಬಜಗೋಳಿ ಸಿ. ಆರ್. ಪಿ. ಕೃಷ್ಣಕುಮಾರ್ ಹೇಳಿದರು.

ಅವರು ಮುದ್ರಾಡಿಯ ಎಂ.ಎನ್.ಡಿ.ಎಸ್.ಎಂ. ಅನುದಾನಿತ ಪ್ರೌಢಶಾಲೆಯಲ್ಲಿ ನಡೆದ ಪೋಷಕರ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ 2022-23ನೇ ಸಾಲಿನಿಂದ 2024-25ನೇ ಸಾಲಿನ ವರೆಗೆ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕಬ್ಬಿನಾಲೆ ಸುರೇಶ್ ಕುಲಾಲ್ ಅವರನ್ನು ಸನ್ಮಾನಿಸಲಾಯಿತು ಹಾಗೂ ಸರ್ವಸದಸ್ಯರನ್ನು ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಕಬ್ಬಿನಾಲೆ ಸುರೇಶ್ ಕುಲಾಲ್ ರವರು ಕಳೆದ ಮೂರು ವರ್ಷಗಳಲ್ಲಿ ರಕ್ಷಕ ಶಿಕ್ಷಕ ಸಮಿತಿ ಅಧ್ಯಕ್ಷನಾಗಿ ಸೇವೆ ಸಲ್ಲಿಸಲು ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.

ಇದೇ ಸಭೆಯಲ್ಲಿ 2025-26 ರಿಂದ 2027-28 ರ ವರೆಗೆ ಮೂರು ವರ್ಷಗಳ ಅವಧಿಗೆ ಆಯ್ಕೆಯಾದ ನೂತನ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಪ್ರತಿಮಾ ಅವರನ್ನು ಗೌರವಿಸಲಾಯಿತು ಹಾಗೂ ಸರ್ವಸದಸ್ಯರಿಗೆ ಗುಲಾಬಿ ಹೂವು ನೀಡಿ ಸ್ವಾಗತಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಸಾಗರ್ ಎಜುಕೇಶನ್ ಟ್ರಸ್ಟ್ ರಿ. ಮುದ್ರಾಡಿ ಇದರ ಕಾರ್ಯದರ್ಶಿಯಾಗಿರುವ ಅಶೋಕ್ ಕುಮಾರ್ ಶೆಟ್ಟಿ ವಹಿಸಿದ್ದರು. ಸಂಸ್ಥೆಯ ಮುಖ್ಯ ಶಿಕ್ಷಕರಾದ ಬಲ್ಲಾಡಿ ಚಂದ್ರಶೇಖರ್ ಭಟ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಿಕ್ಷಕರಾದ ಪಿ.ವಿ. ಆನಂದ್ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿ, ಹಿರಿಯ ಶಿಕ್ಷಕರಾದ ಮಹೇಶ್ ನಾಯ್ಕ ಕೆ. ವಂದಿಸಿದರು. ಶಿಕ್ಷಕರುಗಳಾದ ಶ್ಯಾಮಲಾ , ರಘುಪತಿ ಹೆಬ್ಬಾರ್, ಚಂದ್ರಕಾಂತಿ ಹೆಗ್ಡೆ, ಶಿಕ್ಷಕೇತರ ಸಿಬ್ಬಂದಿ ಮಹೇಶ್ ಕಾನ್ಗುಂಡಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.