
ಉಡುಪಿ: ಕಾರ್ಕಳದ ಹೆಮ್ಮೆಯಾಗಬೇಕಿದ್ದ ಪರಶುರಾಮ ಥೀಮ್ ಪಾರ್ಕ್, ಶಾಸಕ ಸುನೀಲ್ ಕುಮಾರ್ ಅವರ ರಾಜಕೀಯ ಹಿತಾಸಕ್ತಿಗೆ ಬಲಿಯಾಗಿದೆ ಎಂದು ಕಾಂಗ್ರೆಸ್ ಮುಖಂಡ ಉದಯ್ ಕುಮಾರ್ ಶೆಟ್ಟಿ ಆರೋಪಿಸಿದ್ದಾರೆ. ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂಚಿನ ಪ್ರತಿಮೆ ನಿರ್ಮಾಣ ಮಾಡುತ್ತೇನೆಂದು ಸುಳ್ಳು ಹೇಳಿ ಜನರಿಗೆ ಮತ್ತು ಸರ್ಕಾರಕ್ಕೆ ದ್ರೋಹ ಮಾಡಿದ್ದಾರೆ ಎಂದು ಹೇಳಿದರು.
ಪೊಲೀಸ್ ತನಿಖೆಯಿಂದ ಬಯಲಾದ ಸತ್ಯ
ಪ್ರತಿಮೆ ನಿರ್ಮಾಣದಲ್ಲಿ ಮೋಸವಾಗಿದೆ ಎಂಬ ಆರೋಪದ ಮೇಲೆ ಪ್ರಕರಣ ದಾಖಲಾದಾಗಲೂ ಸುನೀಲ್ ಕುಮಾರ್ ಪ್ರತಿಮೆ ಕಂಚಿನದ್ದೇ ಎಂದು ಸಮರ್ಥಿಸಿಕೊಳ್ಳುತ್ತಿದ್ದರು. ಆದರೆ, “ಪೊಲೀಸರ ತನಿಖೆಯ ನಂತರ ಸಲ್ಲಿಸಿದ ದೋಷಾರೋಪಣಾ ಪಟ್ಟಿಯಲ್ಲಿ ಪ್ರತಿಮೆ ಕಂಚಿನದ್ದಲ್ಲ ಎಂಬ ಸತ್ಯ ಬಹಿರಂಗವಾಗಿದೆ” ಎಂದು ಉದಯ್ ಕುಮಾರ್ ಶೆಟ್ಟಿ ಹೇಳಿದರು. ಚುನಾವಣೆಯಲ್ಲಿ ಗೆಲ್ಲುವ ದುರಾಲೋಚನೆಯಿಂದ ಫೈಬರ್ ಮತ್ತು ಇತರ ವಸ್ತುಗಳನ್ನು ಬಳಸಿ ಪ್ರತಿಮೆ ನಿರ್ಮಿಸಲಾಗಿದೆ ಎಂದು ಅವರು ದೂರಿದರು.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ
ಕಂಚಿನ ಪ್ರತಿಮೆ ನಿರ್ಮಿಸುತ್ತೇವೆ ಎಂದು ಸುಳ್ಳು ಹೇಳಿ, ನಕಲಿ ಪ್ರತಿಮೆಯನ್ನು ನಿರ್ಮಿಸುವ ಮೂಲಕ ಕಾರ್ಕಳದ ಜನರ ಧಾರ್ಮಿಕ ಭಾವನೆಗಳಿಗೆ ದಕ್ಕೆ ತಂದಿದ್ದಾರೆ. ಮೂರ್ತಿ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ನಕಲಿ ಪ್ರತಿಮೆಯ ಮುಂದೆ ಭಜನೆಗಳನ್ನು ಮಾಡಿಸಿ, ಶಂಖನಾದಗೈದು ಜನರಲ್ಲಿ ಧಾರ್ಮಿಕ ಭಾವನೆಗಳೊಂದಿಗೆ ಚೆಲ್ಲಾಟವಾಡಿದ್ದಾರೆ ಎಂದು ಅವರು ತೀವ್ರವಾಗಿ ಟೀಕಿಸಿದರು.
“ಸುನೀಲ್ ಕುಮಾರ್ ಅವರಂತೆ ಧರ್ಮಕ್ಕೆ ದ್ರೋಹ ಎಸಗಿದ, ಜನರ ಭಾವನೆಗಳಿಗೆ ಮಸಿ ಬಳಿದ ವ್ಯಕ್ತಿ ಭಾರತದಲ್ಲಿಯೇ ಬೇರೆ ಯಾರೂ ಇರಲಿಕ್ಕಿಲ್ಲ,” ಎಂದು ಉದಯ್ ಕುಮಾರ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ಭಾರತದ ಆತ್ಮವೇ ನಂಬಿಕೆಯಾಗಿದ್ದು, ಆ ನಂಬಿಕೆಗೆ ದ್ರೋಹ ಎಸಗುವ ಮೂಲಕ ಸುನೀಲ್ ಕುಮಾರ್ ದೇಶಕ್ಕೇ ವಂಚನೆ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಮತ್ತೆ ಪ್ರತಿಮೆ ನಿರ್ಮಾಣಕ್ಕೆ ಆಗ್ರಹ
ಜನರ ನಂಬಿಕೆಯನ್ನು, ಧರ್ಮವನ್ನು ಮತ್ತು ಸತ್ಯವನ್ನು ಉಳಿಸಲು, ಬೈಲೂರಿನಲ್ಲಿ ಮತ್ತೆ ಅಸಲಿ ಕಂಚಿನ ಪರಶುರಾಮ ಪ್ರತಿಮೆಯನ್ನು ನಿರ್ಮಿಸುವುದು ನಮ್ಮ ಕರ್ತವ್ಯ ಎಂದು ಉದಯ್ ಕುಮಾರ್ ಶೆಟ್ಟಿ ಹೇಳಿದರು. ಈ ಕುರಿತು ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.
ತಮ್ಮ ಅರ್ಜಿಯಿಂದ ಸುನೀಲ್ ಕುಮಾರ್ ಆತಂಕಿತರಾಗಿದ್ದು, ವಿನಾಕಾರಣ ಅದನ್ನು ವಿರೋಧಿಸುತ್ತಿದ್ದಾರೆ. ಸುನೀಲ್ ಕುಮಾರ್ ಮತ್ತು ಅವರ ಬೆಂಬಲಿಗರು ಎಷ್ಟು ವಿರೋಧಿಸಿದರೂ, ಬೈಲೂರಿನಲ್ಲಿ ಮತ್ತೆ ಪರಶುರಾಮ ಪ್ರತಿಮೆ ನಿರ್ಮಿಸುತ್ತೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.