
ಬೆಂಗಳೂರು : ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿರುವ ಪರಶುರಾಮ ಥೀಮ್ ಪಾರ್ಕ್‌ನ ಪ್ರತಿಮೆಯನ್ನು ಮರು ಸ್ಥಾಪಿಸಲು ಸರ್ಕಾರದ ನಿರ್ದೇಶನ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದ ವ್ಯಕ್ತಿಯೊಬ್ಬರಿಗೆ ಕರ್ನಾಟಕ ಹೈಕೋರ್ಟ್ ₹5 ಲಕ್ಷ ಠೇವಣಿ ಇರಿಸುವಂತೆ ಸೂಚಿಸಿದೆ.
ಪ್ರತಿಮೆ ನಿರ್ಮಾಣಕ್ಕೆ ನಿಮ್ಮ ವೈಯಕ್ತಿಕ ಕಾಣಿಕೆ ಏನು?
ಉಡುಪಿಯ ಉದಯ ಶೆಟ್ಟಿ ಮುನಿಯಾಲು ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಬ್ರು ಹಾಗೂ ನ್ಯಾಯಮೂರ್ತಿ ಸಿ.ಎಮ್. ಜೋಶಿ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ. ಪ್ರತಿಮೆ ನಿರ್ಮಾಣದಿಂದ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂಬ ಅರ್ಜಿದಾರರ ವಾದಕ್ಕೆ, ನ್ಯಾಯಪೀಠವು, “ಜನರ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ವಾದಿಸುತ್ತಿದ್ದೀರಿ. ಹಾಗಾದರೆ ಪ್ರತಿಮೆ ನಿರ್ಮಾಣಕ್ಕೆ ನಿಮ್ಮ ವೈಯಕ್ತಿಕ ಕಾಣಿಕೆ ಏನು?” ಎಂದು ಪ್ರಶ್ನಿಸಿತು.

ನ್ಯಾಯಪೀಠದ ಪ್ರಶ್ನೆಗೆ ಅರ್ಜಿದಾರರ ವಕೀಲರು ₹5 ಲಕ್ಷ ಠೇವಣಿ ಇಡುವುದಾಗಿ ಸಮ್ಮತಿ ಸೂಚಿಸಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ಈ ಮೊತ್ತವನ್ನು 2 ವಾರಗಳಲ್ಲಿ ಹೈಕೋರ್ಟ್ ರಿಜಿಸ್ಟ್ರಾರ್ ಬಳಿ ಠೇವಣಿ ಇಡಬೇಕು ಎಂದು ಸೂಚಿಸಿ, ಅರ್ಜಿ ವಿಚಾರಣೆಯನ್ನು ಮುಂದೂಡಿತು.
ಪರಶುರಾಮನನ್ನು ಕರಾವಳಿ ಪ್ರದೇಶದ ಸೃಷ್ಟಿಕರ್ತ ಎಂದು ನಂಬಲಾಗಿದ್ದು, ಈ ಪ್ರಕರಣ ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.