
ಕಾರ್ಕಳ : ಕಾರ್ಕಳದ ಉಮ್ಮಿಕಲ್ ಬೆಟ್ಟದಲ್ಲಿ ನಿರ್ಮಿಸಲಾದ ಪರಶುರಾಮ ಥೀಮ್ ಪಾರ್ಕ್‌ನಲ್ಲಿನ ಪರಶುರಾಮ ಮೂರ್ತಿ ನಿರ್ಮಾಣದಲ್ಲಿನ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಕಂಚಿನ ಮೂರ್ತಿ ನಿರ್ಮಿಸಬೇಕಿದ್ದಲ್ಲಿ ಹಿತ್ತಾಳೆಯ ಮೂರ್ತಿ ನಿರ್ಮಿಸಿ ಸರ್ಕಾರಕ್ಕೆ ವಂಚಿಸಿದ ಆರೋಪದ ಮೇಲೆ ಶಿಲ್ಪಿ ಕೃಷ್ಣ ನಾಯ್ಕ, ಉಡುಪಿ ನಿರ್ಮಿತಿ ಕೇಂದ್ರದ ಪ್ರೊಜೆಕ್ಟ್ ಡೈರೆಕ್ಟರ್ ಅರುಣ್ ಕುಮಾರ್ ಹಾಗೂ ಇಂಜಿನಿಯರ್ ಸಚಿನ್ ವೈ ಕುಮಾರ್ ವಿರುದ್ಧ ಪೊಲೀಸರು 1231 ಪುಟಗಳ ದೋಷಾರೋಪಣಾ ಪಟ್ಟಿಯನ್ನು ಕಾರ್ಕಳ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ದಿನಾಂಕ 21.06.2024 ರಂದು ಕೃಷ್ಣ ಶೆಟ್ಟಿ ಅವರು ನೀಡಿದ ದೂರಿನನ್ವಯ, ಶಿಲ್ಪಿ ಕೃಷ್ಣ ನಾಯ್ಕ ಅವರು ‘Krish Art World’ ಸಂಸ್ಥೆಯ ಮೂಲಕ ಪರಶುರಾಮ ಮೂರ್ತಿಯನ್ನು ಕಂಚಿನ ಲೋಹದಿಂದ ನಿರ್ಮಿಸಬೇಕಿತ್ತು. ಆದರೆ, ಹಣ ಪಡೆದು ನಕಲಿ ಪರಶುರಾಮ ಮೂರ್ತಿ ನಿರ್ಮಿಸಿ ಸರ್ಕಾರಕ್ಕೆ ವಂಚಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 120/2024 ಕಲಂ 420, 409 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿತ್ತು.
ಪೊಲೀಸ್ ತನಿಖಾ ಅವಧಿಯಲ್ಲಿ ಮತ್ತು ತಜ್ಞರ ಪರಿಶೀಲನಾ ವರದಿಯಿಂದ ಶಿಲ್ಪಿ ಕೃಷ್ಣ ನಾಯ್ಕ ಅವರು ಕಂಚಿನ ಬದಲು ಹಿತ್ತಾಳೆಯ ಲೋಹದಿಂದ ಪರಶುರಾಮ ಮೂರ್ತಿಯನ್ನು ನಿರ್ಮಿಸಿರುವುದು ಸಾಬೀತಾಗಿದೆ.
ಹೆಚ್ಚುವರಿಯಾಗಿ, ನಿರ್ಮಿತಿ ಕೇಂದ್ರದ ಪ್ರೊಜೆಕ್ಟ್ ಡೈರೆಕ್ಟರ್ ಅರುಣ್ ಕುಮಾರ್ ಮತ್ತು ಇಂಜಿನಿಯರ್ ಸಚಿನ್ ವೈ ಕುಮಾರ್ ಅವರು ವರ್ಕ್ ಆರ್ಡರ್‌ನಲ್ಲಿನ ಷರತ್ತುಗಳನ್ನು ಪಾಲಿಸಿಲ್ಲ ಎಂದು ಆರೋಪಿಸಲಾಗಿದೆ. ಅಲ್ಲದೆ, ದಿನಾಂಕ 12.10.2023 ರಂದು ಪರಶುರಾಮ ಮೂರ್ತಿಯ ಸೊಂಟದಿಂದ ಮೇಲ್ಭಾಗವನ್ನು ಉಮ್ಮಿಕಲ್ ಬೆಟ್ಟದಿಂದ ತೆಗೆದುಕೊಂಡು ಹೋಗಿ ಉಡುಪಿ ತಾಲೂಕಿನ ಅಲೆವೂರು ಗ್ರಾಮದ ಪ್ರಗತಿ ನಗರದಲ್ಲಿರುವ ನಿರ್ಮಿತಿ ಕೇಂದ್ರಕ್ಕೆ ಸಂಬಂಧಿಸಿದ ಶೆಡ್‌ನಲ್ಲಿ ದಿನಾಂಕ 25.02.2024 ರವರೆಗೆ ಇರಿಸಿಕೊಂಡಿದ್ದರು. ಆದರೆ, ಮೂರ್ತಿಯ ಈ ಭಾಗವನ್ನು ಶಿಲ್ಪಿ ಕೃಷ್ಣ ನಾಯ್ಕ ಅವರಿಗೆ ಹಸ್ತಾಂತರಿಸಿದಾಗ, ಕೃಷ್ಣ ನಾಯ್ಕ ಅದನ್ನು ಬೆಂಗಳೂರಿಗೆ ಸಾಗಾಟ ಮಾಡಿರುವುದಾಗಿ ತಪ್ಪು ಮಾಹಿತಿ ನೀಡಿದ್ದಾರೆ.
ಈ ಎಲ್ಲಾ ಅಂಶಗಳ ಆಧಾರದ ಮೇಲೆ, ಆರೋಪಿಗಳಾದ ಶಿಲ್ಪಿ ಕೃಷ್ಣ ನಾಯ್ಕ, ಪ್ರೊಜೆಕ್ಟ್ ಡೈರೆಕ್ಟರ್ ಅರುಣ್ ಕುಮಾರ್, ಹಾಗೂ ಇಂಜಿನಿಯರ್ ಸಚಿನ್ ವೈ ಕುಮಾರ್ ಅವರು ಅಪರಾಧಿಕ ಒಳಸಂಚು, ನಂಬಿಕೆ ದ್ರೋಹ, ವಂಚನೆ ಎಸಗಿ, ಸಾಕ್ಷಿ ನಾಶ ಮಾಡಿರುವುದು ದೃಢಪಟ್ಟಿದೆ. ಇವರ ವಿರುದ್ಧ ಕಲಂ 420, 409, 201, 120 (ಬಿ) ಜೊತೆಗೆ 34 ಐಪಿಸಿ ಯಂತೆ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.