
ಕಾರ್ಕಳ : ಪರಶುರಾಮ ಹಿತರಕ್ಷಣಾ ಸಮಿತಿಯೋ ಅಥವಾ ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲು ರಕ್ಷಣಾ ವೇದಿಕೆಯೋ ಎಂದು ಬೈಲೂರಿನ ಪರಶುರಾಮ ಥೀಂ ಪಾರ್ಕ್ ಜನಜಾಗೃತಿ ಸಮಿತಿಯ ಸಚ್ಚಿದನಾಂದ ಶೆಟ್ಟಿ ಪ್ರಶ್ನಿಸಿದ್ದಾರೆ.
ಪರಶುರಾಮ ಹಿತರಕ್ಷಣಾ ಸಮಿತಿ ವಿಸರ್ಜನೆ ಕುರಿತು ಪ್ರತಿಕ್ರಿಯಿಸಿರುವ ಅವರು ಸಮಿತಿಯ ನಿಜ ಬಣ್ಣ ಈಗ ಬಯಲಾಗಿದೆ. ಸಮಿತಿ ಪ್ರವಾಸೋದ್ಯಮ ಉಳಿವು, ಜನರ ಹಿತರಕ್ಷಣೆಗಾಗಿ ಅಸ್ತಿತ್ವಕ್ಕೆ ಬಾರದೆ , ಇದರ ಅಸ್ತಿತ್ವವೂ ವಿಸರ್ಜನೆಯೂ ಉದಯ ಶೆಟ್ಟಿಯ ರಾಜಕೀಯ ಲಾಭಕ್ಕಾಗಿ ಹುಟ್ಟಿಕೊಂಡಿತ್ತು. ಕಾಂಗ್ರೆಸ್ ನ ಮುಖವಾಣಿಯಾಗಿಯೇ ಅಂದಿನಿಂದ ಇಂದಿನವರೆಗೂ ಕೆಲಸ ಮಾಡಿಕೊಂಡು ಬಂದಿತ್ತು. ಎನ್ನುವ ಸತ್ಯ ಸಾರ್ವಜನಿಕವಾಗಿ ಬಹಿರಂಗಗೊಂಡಿದೆ ಎಂದು ಆರೋಪಿಸಿದರು.
ಪ್ರವಾಸೋದ್ಯಮವಾಗಿದ್ದ ಥೀಂ ಪಾರ್ಕ್ ಕಾಮಗಾರಿಗೆ ನಾನಾ ತರಹ ಅಡ್ಡಿ ಪಡಿಸಿ, ತಡೆದು ಕಳೆದೆರಡು ವರ್ಷ ನಾಟಕವಾಡಿ ಪ್ರವಾಸೋದ್ಯಮಕ್ಕೆ ನಷ್ಟ ಮಾಡಿದರಲ್ಲ? ಆದ ಕೋಟ್ಯಾಂತರ ರೂಪಾಯಿ ನಷ್ಟಕ್ಕೆ ಸಮಿತಿಯವರು ಹಾಗೂ ಕಾಂಗ್ರೆಸ್ ನಾಯಕ ಉದಯ ಶೆಟ್ಟಿಯೇ ನೇರ ಹೊಣೆಗಾರರು.
ಅಂದು “ರಸ್ತೆಗೆ ಮಣ್ಣು ಹಾಕಿ ಕಾಮಗಾರಿ ಅಡ್ಡಿಪಡಿಸಿದ್ದು ಯಾರ ಹಿತಕ್ಕಾಗಿ? ಜನರ ಹಿತಕ್ಕಾಗಿ ಅಲ್ಲ, ಕಾಂಗ್ರೆಸ್ ಲಾಭ ಪಡೆಯುವುದರ ಹಿತಕ್ಕಾಗಿ” ಎಂದು ಹೇಳಿದ ಅವರು, ದಿನಕ್ಕೊಂದು ನಾಟಕ ಮಾಡಿ ಥೀಂ ಪಾರ್ಕ್ ಅನ್ನು ರಾಜಕೀಯವಾಗಿ ಮುಗಿಸುವುದೇ ಇವರ ಗುರಿ ಎಂದು ಆರೋಪಿಸಿದರು.
“ರಾಜಕೀಯ ರಹಿತ” ಎಂದು ಹೇಳಿಕೊಂಡಿದ್ದ ಸಮಿತಿ ವಾಸ್ತವದಲ್ಲಿ ಕಾಂಗ್ರೆಸ್ ಸ್ವಹಿತಕ್ಕಾಗಿ ಮಾತ್ರ ಕೆಲಸ ಮಾಡಿದ ಕಾಂಗ್ರೆಸ್ ನ ಅಂಗ ಸಂಸ್ಥೆಯಾಗಿತ್ತು. ಕಾಂಗ್ರೆಸ್ ನ ನಕಲಿ ಹೋರಾಟದಂತೆ ಇದು ಕೂಡ ಒಂದು ನಕಲಿ ಹಿತರಕ್ಷಾಣಾ ಸಮಿತಿ ಆಗಿ ಕಾರ್ಯನಿರ್ವಹಿಸಿತ್ತು ಎಂದು ಬೈಲೂರಿನ ಪರಶುರಾಮ ಥೀಂ ಪಾರ್ಕ್ ಜನಜಾಗೃತಿ ಸಮಿತಿಯ ಸಚ್ಚಿದನಾಂದ ಶೆಟ್ಟಿ ಆರೋಪಿಸಿದ್ದಾರೆ.