
ಭದ್ರಾವತಿ : ಭದ್ರಾವತಿ ನಗರದಲ್ಲಿ ಇತ್ತೀಚೆಗೆ ನಡೆದ ಈದ್‌ಮಿಲಾದ್ ಮೆರವಣಿಗೆಯ ಸಂದರ್ಭದಲ್ಲಿ, ಕೆಲವು ಯುವಕರು ಪ್ಯಾಲೇಸ್ತೀನ್ ಧ್ವಜವನ್ನು ಪ್ರದರ್ಶಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಲಾಗಿದೆ.
ಸೆಪ್ಟೆಂಬರ್ 8ರಂದು ಬೆಳಿಗ್ಗೆ 10.30 ರಿಂದ 11 ಗಂಟೆಯ ಸಮಯದಲ್ಲಿ ಮೂವರು ಯುವಕರು ಬೈಕ್ ಮೇಲೆ ದೊಡ್ಡ ಗಾತ್ರದ ಪ್ಯಾಲೇಸ್ತೀನ್ ಧ್ವಜವನ್ನು ಹಿಡಿದು, ‘ಅಕ್ಸಾ ಮಸೀದಿ ಪ್ಯಾಲೇಸ್ತೀನ್’ ಎಂದು ಘೋಷಣೆ ಕೂಗುತ್ತಾ ಹೋಗುತ್ತಿರುವುದು ವೈರಲ್ ಆಗಿರುವ ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಈ ಘಟನೆಯು ಸಾರ್ವಜನಿಕ ಸುವ್ಯವಸ್ಥೆ ಮತ್ತು ಭಾವನಾತ್ಮಕ ವಿಷಯಗಳಿಗೆ ಸಂಬಂಧಿಸಿರುವುದರಿಂದ, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಿಡಿಯೋದ ಆಧಾರದ ಮೇಲೆ ಯುವಕರನ್ನು ಪತ್ತೆಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ.



































