
ಹೊಸದಿಲ್ಲಿ: ಪಾಕಿಸ್ತಾನ ಭಾರತದ ಗಡಿ ರಾಜ್ಯಗಳಾದ ಜಮ್ಮು-ಕಾಶ್ಮೀರ, ರಾಜಸ್ಥಾನ, ಪಂಜಾಬ್ ಮತ್ತು ಗುಜರಾತ್‌ನ 26 ಗಡಿ ನಗರಗಳನ್ನು ಗುರಿಯಾಗಿಸಿ ಡ್ರೋನ್ ದಾಳಿ ನಡೆಸಿದ ಬೆನ್ನಲ್ಲೇ, ಭಾರತ ಶನಿವಾರ ಮುಂಜಾನೆ ಪಾಕಿಸ್ತಾನಕ್ಕೆ ತೀವ್ರ ಪ್ರತಿದಾಳಿ ನಡೆಸಿದೆ.
ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ಗೆ ಕೇವಲ 10 ಕಿಲೋಮೀಟರ್ ದೂರದಲ್ಲಿರುವ, ದೇಶದ ಪ್ರಮುಖ ಸೇನಾ ನೆಲೆಗಳ ಪೈಕಿ ಒಂದಾದ ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆ, ಮತ್ತು ಚಕ್ವಾಲ್ ಜಿಲ್ಲೆಯ ಮುರಿದ್ ವಾಯುನೆಲೆ, ಜಾಂಗ್ ಜಿಲ್ಲೆಯ ರಫಿಕಿ ವಾಯುನೆಲೆ ಸೇರಿದಂತೆ ನಾಲ್ಕು ವಾಯುನೆಲೆಗಳ ಮೇಲೆ ಭಾರತವು ಕ್ಷಿಪಣಿ ದಾಳಿ ನಡೆಸಿದ ಮಾಹಿತಿ ಬಂದಿದೆ.
ಈ ದಾಳಿಯಿಂದ ಪಾಕಿಸ್ತಾನದಲ್ಲಿ ಭಾರಿ ಆತಂಕ ಉಂಟಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವೀಡಿಯೊಗಳಲ್ಲಿ, ನೂರ್ ಖಾನ್ ವಾಯುನೆಲೆಯಲ್ಲಿ ಸ್ಫೋಟ, ಬೆಂಕಿ, ಜನರ ಗದ್ದಲಗಳು, ಹಾಗೂ ಸತತ ಸ್ಫೋಟಗಳ ದೃಶ್ಯಗಳು ಕಾಣಿಸುತ್ತಿವೆ. ಈ ಘಟನೆಯ ಬಳಿಕ ಪಾಕಿಸ್ತಾನ ತಕ್ಷಣವೇ ತನ್ನ ಇಸ್ಲಾಮಾಬಾದ್, ಲಾಹೋರ್, ಸಿಯಾಲ್‌ಕೋಟ್, ರಹೀಮ್ ಖಾನ್ ವಾಯುನೆಲೆಗಳಲ್ಲಿ ನಾಗರಿಕ ಮತ್ತು ವಾಣಿಜ್ಯ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ನೂರ್ ಖಾನ್ ವಾಯುನೆಲೆ, ಹಿಂದಿನ ಚಕ್ಲಾಲಾ ಏರ್‌ಬೇಸ್, ಪಾಕಿಸ್ತಾನದ ಅತ್ಯಂತ ಪ್ರಮುಖ ಮತ್ತು ರಹಸ್ಯ ಮಿಲಿಟರಿ ನೆಲೆಗಳಲ್ಲಿ ಒಂದಾಗಿದ್ದು, ಇತರ ಮಿಲಿಟರಿ ಘಟಕಗಳ ಜೊತೆಗೆ ವಿಐಪಿ ವಿಮಾನ ಸಂಚಾರಕ್ಕೂ ಬಳಸಲಾಗುತ್ತದೆ.
ಡ್ರೋನ್ ದಾಳಿಯ ನೇರ ಪರಿಣಾಮವಾಗಿ ಭಾರತದ ವಾಣಿಜ್ಯ ವಿಮಾನಗಳನ್ನು ಗುರಿಯಾಗಿಸಲಾಗುತ್ತಿದೆ ಎಂದು ಪಾಕ್ ಆರೋಪಿಸಿದ್ದ ಕೆಲವೇ ಗಂಟೆಗಳ ನಂತರ ಈ ದಾಳಿ ನಡೆದಿರುವುದರಿಂದ, ಎರಡು ರಾಷ್ಟ್ರಗಳ ನಡುವಿನ ವಾತಾವರಣ ಮತ್ತಷ್ಟು ಉದ್ವಿಗ್ನವಾಗಿದೆ.