
ಇಸ್ಲಾಮಾಬಾದ್ /ಕಾಬೂಲ್ : ದಶಕಗಳಿಂದ ಧಗಧಗಿಸುತ್ತಿರುವ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಗಡಿ ವಿವಾದವು ಈಗ ಅಧಿಕೃತವಾಗಿ ‘ಮುಕ್ತ ಯುದ್ಧ’ವಾಗಿ ಮಾರ್ಪಟ್ಟಿದೆ. ನೆರೆಯ ರಾಷ್ಟ್ರಗಳ ನಡುವಿನ ತಾಳ್ಮೆಯ ಕಟ್ಟೆ ಒಡೆದಿದ್ದು, ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್ ಅವರು ಅಫ್ಘಾನ್ ತಾಲಿಬಾನ್ ಆಡಳಿತದ ವಿರುದ್ಧ ಬಹಿರಂಗ ಯುದ್ಧ ಘೋಷಿಸಿದ್ದಾರೆ. ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಮಾತುಕತೆಗಳು ಸಂಪೂರ್ಣವಾಗಿ ವಿಫಲವಾಗಿದ್ದು, ಗಡಿಯಲ್ಲಿ ಯುದ್ಧದ ಕಾರ್ಮೋಡ ಕವಿದಿದೆ.
ಈ ಉದ್ವಿಗ್ನತೆಯು ಕಳೆದ ರಾತ್ರಿ ತಾರಕಕ್ಕೇರಿದ್ದು, ಪಾಕಿಸ್ತಾನದ ವಾಯುಪಡೆಯು ಅಫ್ಘಾನಿಸ್ತಾನದ ಹೃದಯಭಾಗ ಕಾಬೂಲ್ ಹಾಗೂ ಕಂದಹಾರ್ ಮೇಲೆ ಭೀಕರ ಬಾಂಬ್ ದಾಳಿ ನಡೆಸಿದೆ. ಇದಕ್ಕೆ ಪ್ರತೀಕಾರವಾಗಿ ಅಫ್ಘಾನ್ ಪಡೆಗಳು ಗಡಿ ನಿಯಂತ್ರಣ ರೇಖೆಯ ಬಳಿ ಪಾಕಿಸ್ತಾನಿ ಪಡೆಗಳ ಮೇಲೆ ಮುಗಿಬಿದ್ದಿವೆ. ಈ ಭೀಕರ ಸಂಘರ್ಷದಲ್ಲಿ ಪಾಕಿಸ್ತಾನವು ತಾವು 133 ಅಫ್ಘಾನ್ ಹೋರಾಟಗಾರರನ್ನು ಸಂಹರಿಸಿದ್ದೇವೆ ಎಂದು ಪ್ರತಿಪಾದಿಸಿದ್ದರೆ, ಅತ್ತ ತಾಲಿಬಾನ್ ಆಡಳಿತವು 55 ಪಾಕಿಸ್ತಾನಿ ಸೈನಿಕರನ್ನು ಹತ್ಯೆಗೈದಿರುವುದಾಗಿ ಘೋಷಿಸಿದೆ. ಪಕ್ತಿಯಾ ಮತ್ತು ಕಂದಹಾರ್ ಪ್ರಾಂತ್ಯಗಳಲ್ಲಿ ಪಾಕ್ ನಡೆಸಿದ ವೈಮಾನಿಕ ದಾಳಿಯಿಂದ ಭಾರಿ ಹಾನಿಯಾಗಿದ್ದು, ಅಫ್ಘಾನ್ ರಾಜಧಾನಿ ಕಾಬೂಲ್‌ನಲ್ಲಿ ಸರಣಿ ಸ್ಫೋಟಗಳು ಜನರನ್ನು ಬೆಚ್ಚಿಬೀಳಿಸಿವೆ. ಈ ಬೆಳವಣಿಗೆಯು ದಕ್ಷಿಣ ಏಷ್ಯಾದ ಭದ್ರತೆಗೆ ದೊಡ್ಡ ಕಂಟಕವಾಗಿ ಪರಿಣಮಿಸಿದೆ.



































