
ಇಸ್ಲಾಮಾಬಾದ್: ತನ್ನ ಆಂತರಿಕ ವೈಫಲ್ಯಗಳನ್ನು ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸುತ್ತಿರುವ ಪಾಕಿಸ್ತಾನ, ಇದೀಗ ಭಾರತ ಮತ್ತು ಅಫ್ಘಾನಿಸ್ತಾನದ ವಿರುದ್ಧ ಹೊಸ ದಾಳ ಆರಂಭಿಸಿದೆ. ಅಫ್ಘಾನಿಸ್ತಾನದ ಮಣ್ಣನ್ನು ಭಾರತವು ಪಾಕಿಸ್ತಾನದ ವಿರುದ್ಧದ ಉಗ್ರ ಚಟುವಟಿಕೆಗಳಿಗೆ ತಾಣವಾಗಿ ಬಳಸಿಕೊಳ್ಳುತ್ತಿದೆ ಎಂದು ಪಾಕ್ ಸೇನೆ ಗಂಭೀರ ಆರೋಪ ಮಾಡಿದೆ.
ಸೇನಾ ವಕ್ತಾರರ ಪ್ರಚೋದನಾಕಾರಿ ಹೇಳಿಕೆ: ಪಾಕಿಸ್ತಾನದ ಸೇನಾ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹ್ಮದ್ ಶರೀಫ್ ಚೌಧರಿ ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಅಫ್ಘಾನಿಸ್ತಾನವು ಇಂದು ಜಾಗತಿಕ ಭಯೋತ್ಪಾದನೆಯ ಕೇಂದ್ರಬಿಂದುವಾಗಿ ಬದಲಾಗುತ್ತಿದೆ. ಇಲ್ಲಿನ ಆಡಳಿತವು ಟಿಟಿಪಿ (ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ) ಅಂತಹ ಸಂಘಟನೆಗಳಿಗೆ ಆಶ್ರಯ ನೀಡುತ್ತಿದೆ. ಅಚ್ಚರಿಯೆಂದರೆ, ಈ ತಾಲಿಬಾನ್ ಉಗ್ರರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ‘ಹೊಸ ಹೀರೊ’ ಆಗಿ ಕಾಣುತ್ತಿದ್ದಾರೆ” ಎಂದು ಲೇವಡಿ ಮಾಡಿದ್ದಾರೆ. ಅಫ್ಘಾನ್ ಗಡಿಯಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಭಾರತದ ಪ್ರಚೋದನೆಯೇ ಕಾರಣ ಎಂದು ಅವರು ಪ್ರತಿಪಾದಿಸಿದ್ದಾರೆ.
ಸುಳ್ಳು ಆರೋಪಗಳ ಹಿಂದಿನ ಅಸಲಿ ಗುಟ್ಟು: ಪಾಕಿಸ್ತಾನದ ಈ ಹತಾಶೆಯ ಹಿಂದೆ ದೊಡ್ಡ ರಾಜತಾಂತ್ರಿಕ ಕಾರಣವಿದೆ ಎಂದು ಭಾರತೀಯ ಗುಪ್ತಚರ ಇಲಾಖೆಯ ಮೂಲಗಳು ವಿಶ್ಲೇಷಿಸಿವೆ. ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಯೋಜನೆಗಳು ಪಾಕಿಸ್ತಾನದ ಅಸ್ಥಿರತೆಯಿಂದಾಗಿ ಕುಂಟುತ್ತಾ ಸಾಗುತ್ತಿವೆ. ಇದರಿಂದ ಚೀನಾ ತೀವ್ರ ಅಸಮಾಧಾನಗೊಂಡಿದ್ದು, ಬೀಜಿಂಗ್ ಅನ್ನು ಸಮಾಧಾನಪಡಿಸಲು ಪಾಕಿಸ್ತಾನವು ಈ ವಿಳಂಬಕ್ಕೆ ‘ಭಾರತದ ಹಸ್ತಕ್ಷೇಪ’ವೇ ಕಾರಣ ಎಂದು ಸುಳ್ಳು ಕಥೆಗಳನ್ನು ಹೆಣೆಯುತ್ತಿದೆ. ಅಲ್ಲದೆ, ಪಾಕಿಸ್ತಾನದೊಳಗೆ ಹೆಚ್ಚುತ್ತಿರುವ ಆರ್ಥಿಕ ಬಿಕ್ಕಟ್ಟು ಮತ್ತು ಆಂತರಿಕ ಬಂಡಾಯದಿಂದ ಜನರ ಗಮನ ಬೇರೆಡೆ ಸೆಳೆಯಲು ಭಾರತದ ವಿರುದ್ಧ ಇಂತಹ ಗಂಭೀರ ಆರೋಪಗಳನ್ನು ಮಾಡುತ್ತಿದೆ ಎಂಬುದು ಸ್ಪಷ್ಟವಾಗಿದೆ.



































