
ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ ನಡೆದ ಭೀಕರ ಉಗ್ರದಾಳಿಯಲ್ಲಿ ಬೆಂಗಳೂರಿನ ಜೆ.ಪಿ. ಪಾರ್ಕ್ ನಿವಾಸಿ ಹಾಗೂ ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಮೂಲದ ಭರತ್ ಭೂಷಣ್ (41) ಮತ್ತು ಶಿವಮೊಗ್ಗದ ಮಂಜುನಾಥ್ ದುರ್ಮರಣಕ್ಕೀಡಾಗಿದ್ದಾರೆ.
ಭರತ್ ಭೂಷಣ್ , ಪತ್ನಿ ಸುಜಾತಾ (37) ಹಾಗೂ ಮೂರು ವರ್ಷದ ಮಗುವಿನೊಂದಿಗೆ ಕಾಶ್ಮೀರ ಪ್ರವಾಸದಲ್ಲಿದ್ದರು. ಭರತ್ ಭೂಷಣ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿ ಆಗಿದ್ದು, ತನ್ನ ಕುಟುಂಬ ಸಮೇತ ಯಶವಂತಪುರದ ಮತ್ತಿಕೇರೆಯ ಜೆ.ಪಿ. ಪಾರ್ಕ್‌ನಲ್ಲಿ ವಾಸವಾಗಿದ್ದರು. ಪತ್ನಿ ಮತ್ತು ಮಗುವಿನ ಎದುರೇ ಉಗ್ರರು ಗುಂಡು ಹಾರಿಸಿ ಭರತ್ ಅವರನ್ನು ಹತ್ಯೆಗೈದರು ಎಂಬ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.
ಸಂಜೆ ಪ್ರವಾಸದ ವೇಳೆ ಉಗ್ರನೊಬ್ಬ ನೇರವಾಗಿ ಸಮೀಪಿಸಿ, “ನಿನ್ನ ಹೆಸರು ಏನು? ಯಾವ ಧರ್ಮದವರು?” ಎಂದು ಪ್ರಶ್ನಿಸಿ, “ಹಿಂದೂ” ಎಂದು ಉತ್ತರಿಸಿದ ಕೂಡಲೇ ಭರತ್ ಅವರ ತಲೆಗೆ ಗುಂಡು ಹಾರಿಸಿದ್ದಾನೆ. ಪತ್ನಿ ಸುಜಾತಾ ಈ ಘಟನೆಗೆ ಸಾಕ್ಷಿಯಾಗಿದ್ದು, ಮಗುವನ್ನು ಎತ್ತಿಕೊಂಡು ಸ್ಥಳದಿಂದ ಓಡಿದ್ದಾರೆ.
ಈ ಘಟನೆ ಸಂಬಂಧ ಸಂಸದ ತೇಜಸ್ವಿ ಸೂರ್ಯ ತಕ್ಷಣವೇ ಭರತ್ ಅವರ ಪತ್ನಿ ಸುಜಾತಾರನ್ನು ಸಂಪರ್ಕಿಸಿ, ಸ್ಥಳೀಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಅವರನ್ನು ಸುರಕ್ಷಿತವಾಗಿ ಅನಂತನಾಗ್‌ನ ಶಿಬಿರವೊಂದಕ್ಕೆ ಸ್ಥಳಾಂತರಿಸುವಲ್ಲಿ ನೆರವಾಗಿ ಮಾನವೀಯತೆ ಮೆರೆದಿದ್ದಾರೆ.
ಭರತ್ ಭೂಷಣ್ ರಾಣೆಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ಅವರ ಸಹೋದರಿಯ ಗಂಡನ ಸ್ನೇಹಿತರಾಗಿದ್ದವರಂತೆ ಸ್ಥಳೀಯ ಮೂಲಗಳು ತಿಳಿಸಿವೆ.