
ಪಡುಬಿದ್ರಿ : ಪಡುಬಿದ್ರಿಯ ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಾಲಯದ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿರುವ ನಡುವೆ, ಭಾನುವಾರ ಜೀರ್ಣೋದ್ಧಾರ ಸಮಿತಿಯಿಂದ ನಿವೇದನಾ ಪತ್ರವನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು.
ಸುಮಾರು ₹30 ಕೋಟಿ ವೆಚ್ಚದ ಈ ಪುನರ್ ನಿರ್ಮಾಣ ಯೋಜನೆಗೆ ಭಕ್ತಾಭಿಮಾನಿಗಳು ಭಾಗವಹಿಸಲು ಅವಕಾಶ ಕಲ್ಪಿಸುವ ಉದ್ದೇಶದಿಂದ, ಸಮಿತಿ ಈ ಪತ್ರವನ್ನು ಬಿಡುಗಡೆ ಮಾಡಿದೆ. ಸಮಿತಿಯ ಉಪಾಧ್ಯಕ್ಷ ಪಿ. ರವೀಂದ್ರನಾಥ ಜಿ. ಹೆಗ್ಡೆ ಅವರು ಮಾತನಾಡಿ, “ದೇವಾಲಯದ ಪುನರ್ ನಿರ್ಮಾಣ ಕಾರ್ಯ ಎಲ್ಲಾ ಗ್ರಾಮಸ್ಥರ ಸಹಕಾರದೊಂದಿಗೆ ಪೂರ್ಣಗೊಳ್ಳಬೇಕಿದೆ. ಪ್ರತಿಯೊಬ್ಬರನ್ನೂ ಈ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗುವಂತೆ ಮನವಿಮಾಡಲಾಗುತ್ತಿದೆ,” ಎಂದು ಹೇಳಿದರು.
ದೇವಳದ ಆನುವಂಶಿಕ ಮೊಕ್ತೇಸರರಾದ ಭವಾನಿಶಂಕರ್ ಹೆಗ್ಡೆ, ಕಾರ್ಯ ನಿರ್ವಹಣಾಧಿಕಾರಿ ವೇದಮೂರ್ತಿ ರಾಜಗೋಪಾಲ ಆಚಾರ್ಯ, ಅರ್ಚಕ ವೈ. ಗುರುರಾಜ್ ಭಟ್, ಪ್ರಧಾನ ಕಾರ್ಯದರ್ಶಿ ಶ್ರೀನಾಥ್ ಹೆಗ್ಡೆ, ಸಮಿತಿ ಸದಸ್ಯ ಪ್ರಕಾಶ್ ದೇವಾಡಿಗ, ಗ್ರಾ.ಪಂ ಅಧ್ಯಕ್ಷೆ ಶಶಿಕಲಾ ವೈ. ಪೂಜಾರಿ ಸೇರಿದಂತೆ ಅನೇಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಪಡುಬಿದ್ರಿ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಲ್ಲಿ ಸಮಿತಿಗಳನ್ನು ರಚಿಸಲಾಗಿದ್ದು, ಶಿಲಾಸೇವೆಯ ವ್ಯವಸ್ಥೆಯ ಮೂಲಕ ಭಕ್ತರಿಗೆ ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಈ ಜೀರ್ಣೋದ್ಧಾರ ಕಾರ್ಯಗಳು ನಿಗದಿತ ಸಮಯದಲ್ಲಿ ಪೂರ್ಣಗೊಂಡು, 2026ರ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಪುನಃಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಆಯೋಜನೆ ನಡೆಯಲಿದೆ ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಕಾರ್ಯಕ್ರಮದಲ್ಲಿ ಗಣೇಶ್ ಕೋಟ್ಯಾನ್, ಮಿಥುನ್ ಆರ್. ಹೆಗ್ಡೆ, ನವೀನ್ ಎನ್. ಶೆಟ್ಟಿ, ಎ. ಮಹೇಂದ್ರ, ಗಿರಿಧರ್ ಪೂಜಾರಿ, ಶಶಿಕಲಾ ಪೂಜಾರಿ, ಭಾಸ್ಕರ್ ಪಡುಬಿದ್ರಿ, ಪಿ. ಆರ್. ನಾವಡ, ನವೀನ್ ಚಂದ್ರ ಜೆ. ಶೆಟ್ಟಿ, ಪಿ.ಕೆ. ಸದಾನಂದ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.ರಾಮಚಂದ್ರ ಆಚಾರ್ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು ಹಾಗೂ ಶ್ರೀನಾಥ್ ಹೆಗ್ಡೆ ವಂದನಾರ್ಪಣೆ ಸಲ್ಲಿಸಿದರು.