
ಉಡುಪಿ : ಉಡುಪಿ ಪಡುಬೈಲೂರು ಶ್ರೀ ಇಷ್ಟ ಮಹಾಲಿಂಗೇಶ್ವರ ಹುಲಿವೇಷ ತಂಡವು ತನ್ನ ಸೇವೆಯ ಸಾರ್ಥಕ 9 ವರ್ಷಗಳನ್ನು ಪೂರೈಸಿ ಈಗ ದಶಮಾನ ವರ್ಷದ ಸೇವೆಗೆ ಸಜ್ಜಾಗಿದೆ. ಸಹೃದಯ ಕಲಾಪ್ರೇಮಿಗಳ ಸಹಕಾರ, ಬೆಂಬಲದಿಂದ ಈ ತಂಡವು ವರ್ಷದಿಂದ ವರ್ಷಕ್ಕೆ ತನ್ನ ಹುಲಿವೇಷ ಪ್ರದರ್ಶನದಲ್ಲಿ ವೈಶಿಷ್ಟ್ಯಪೂರ್ಣ ನಾವಿನ್ಯತೆ ಹೊಂದಿಸಿಕೊಂಡು ಹತ್ತು ಹಲವು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ.
ಈ ದಶಮಾನೋತ್ಸವ ಸಂಧರ್ಭವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದ್ದು, ಸೆಪ್ಟೆಂಬರ್ 13 ರಿಂದ 15ರ ವರೆಗೆ ನಡೆಯಲಿದೆ. ದಿನಾಂಕ 13 ರಂದು, ಉಡುಪಿ ಕ್ಷೇತ್ರದಲ್ಲಿ ಸಾಂಪ್ರದಾಯಿಕ ಹುಲಿವೇಷ ಕಲೆಯಲ್ಲಿ ಹೆಚ್ಚಿನ ಸೇವೆಸಲ್ಲಿಸಿದ ಕಲಾವಿದರನ್ನು ಸನ್ಮಾನಿಸುವ ಕಾರ್ಯಕ್ರಮವಿದ್ದು, ಅಂದು ಸಾಯಂಕಾಲ 6.30 ಗಂಟೆಗೆ ದೇವಸ್ಥಾನದ ಆವರಣದಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಭಾವೀ ಪರ್ಯಾಯ ಪೀಠಾಧಿಪತಿಗಳಾಗಿರುವ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು, ಶ್ರೀ ಶೀರೂರು ಮಠ ಇವರು ಉದ್ಘಾಟಿಸಿ ಆಶೀರ್ವಚನ ನೀಡಲಿರುವರು. ಕೊರಂಗ್ರಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಕ್ಷೇತ್ರ ತಂತ್ರಿಗಳಾದ ಶ್ರೀ ಕೃಷ್ಣಮೂರ್ತಿ ತಂತ್ರಿಯವರು ಸಭಾಧ್ಯಕ್ಷತೆ ವಹಿಸಲಿರುವರು. ಶಾಸಕರಾದ ಶ್ರೀ ಯಶ್ಪಾಲ್ ಸುವರ್ಣ, ಶ್ರೀ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವರುಗಳಾದ ಶ್ರೀ ಪ್ರಮೋದ್ ಮಧ್ವರಾಜ್, ಶ್ರೀ ವಿನಯ್ ಕುಮಾರ್ ಸೊರಕೆ, ಜಿಲ್ಲಾಧಿಕಾರಿಗಳಾದ ಸ್ವರೂಪ ಟಿ.ಕೆ, ಗಾಂಧಿ ಆಸ್ಪತ್ರೆಯ ಮೇನೇಜಿಂಗ್ ಡೈರೆಕ್ಟರ್ ಡಾ. ಎಂ. ಹರಿಶ್ಚಂದ್ರ ಮತ್ತು ಹಲವಾರು ಗಣ್ಯರು(ಆಹ್ವಾನ ಪತ್ರಿಕೆಯಲ್ಲಿ ನಮೂದಿಸಿದೆ) ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಸಂಧರ್ಭದಲ್ಲಿ ಹಲವಾರು ವರ್ಷಗಳಿಂದ ಇಷ್ಟ ಮಹಾಲಿಂಗೇಶ್ವರ ಹುಲಿವೇಷ ತಂಡವನ್ನು ವಿವಿಧ ರೀತಿಯಲ್ಲಿ ಬೆಂಬಲಿಸಿದ ಕಲಾಭಿಮಾನಿಗಳನ್ನು ಹಾಗೂ ಉಡುಪಿ ಸುತ್ತಮುತ್ತಲಿನ ಹೆಸರಾಂತ ತಂಡಗಳನ್ನು ಗೌರವಿಸುವ ಕಾರ್ಯಕ್ರಮನ್ನು ಹೊ೦ದಿದೆ. ನಂತರ 10 ತಾಸೆಗಳ ವಾದನದೊಂದಿಗೆ ಹಿರಿಯ ಕಲಾವಿದರಿಂದ ಹುಲಿವೇಷ ಕುಣಿತ ನಡೆಯಲಿದೆ.

ಸೆಪ್ಟೆಂಬರ್ 14, ಭಾನುವಾರದಂದು ಮುಂಜಾನೆ 6.30 ಗಂಟೆಗೆ ಲೋಬಾನ ಸೇವೆಯು ನಡೆಯಲಿದ್ದು, ಸೆ. 15 ವಿಟ್ಲಪಿಂಡಿಯಂದು ರಥಬೀದಿಯಲ್ಲಿ ಹಾಗೂ ರಾಜಾಂಗಣದಲ್ಲಿ ಹುಲಿವೇಷ ಪ್ರದರ್ಶನ ನಡೆಯಲಿದೆ. ಸುಮಾರು 45 ವೇಷಧಾರಿಗಳನ್ನೊಳಗೊಂಡ ಶ್ರೀ ಇಷ್ಟ ಮಹಾಲಿಂಗೇಶ್ವರ ಹುಲಿವೇಷ ತಂಡದಿಂದ ಈ ಬಾರಿ ಅದ್ದೂರಿಯ ಪ್ರದರ್ಶನ ನಡೆಯಲಿದೆ ಎಂದು ಪತ್ರಿಕಾ ಗೋಷ್ಟಿಯಲ್ಲಿ ವಿವರಿಸಲಾಯಿತು.
ಈ ಪತ್ರಿಕಾ ಗೋಷ್ಟಿಯಲ್ಲಿ ತಂಡದ ಸಂಚಾಲಕ ಶ್ರೀ ನಾಗೇಶ್ ಐತಾಳ್, ತಂಡದ ನಾಯಕ ಶ್ರೀ ಗೌತಮ್ ಕೆ.ಬಿ., ಜಿಲ್ಲಾ ಬ್ರಾಹ್ಮಣ ಮಹಾ ಸಭಾ ಅಧ್ಯಕ್ಷರಾದ ಶ್ರೀ ಸಂದೀಪ್ ಮಂಜ, ಅಭಿಷೇಕ್ ಕನ್ನರ್ಪಾಡಿ, ಲಕ್ಷ್ಮೀಶ ಭಟ್ ಉಪಸ್ಥಿತರಿದ್ದು, ವಿವರಣೆ ನೀಡಿದರು.