
ಉಡುಪಿ : ವಿದ್ಯಾರ್ಥಿಗಳ ಏಳಿಗೆಗೆ ಶ್ರಮಿಸಿದ ಶಿಕ್ಷಕರ ಶ್ರಮ ಎಂದೂ ವ್ಯರ್ಥವಾಗದು. ಅಂತಹ ಕಾರ್ಯದಲ್ಲಿ ತೊಡಗಿಸಿಕೊಂಡ ಉಡುಪಿ ಜಿಲ್ಲಾ ಅನುದಾನಿತ ಮತ್ತು ಅನುದಾನ ರಹಿತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರ ಸಂಘದ ಕಾರ್ಯ ಶ್ಲಾಘನೀಯ ಎಂದು ಮಾಹೆಯ ಪ್ರಿನ್ಸಿಪಾಲ್ ಆಫಿಸರ್ ಡಾ. ಆದಿತ್ಯ ಮೋಹನ್ ಜಾಧವ್ ಹೇಳಿದರು. ಮಾಹೆ ಮಣಿಪಾಲದಲ್ಲಿ ಆಗಸ್ಟ್ 5, 2025ರಂದು ಜರುಗಿದ ಉಡುಪಿ ಜಿಲ್ಲಾ ಅನುದಾನಿತ ಮತ್ತು ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ವಾರ್ಷಿಕ ಸಭೆ ಹಾಗೂ ಸಾಧಕ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಮಾಹ ಮಣಿಪಾಲದಲ್ಲಿ ಕೇವಲ ವೈದ್ಯಕೀಯ, ಇಂಜಿನಿಯರಿಂಗ್ ಮಾತ್ರವಲ್ಲದೇ ಇತರ ನೂರಾರು ಪದವಿ-ವೃತ್ತಿಪರ ಕೋರ್ಸುಗಳಿಗೆ ಅವಕಾಶವಿದೆ ಎಂದರು.

ಸಭೆಯಲ್ಲಿ ಉಪಸ್ಥಿತರಿದ್ದ ಮಾಹೆಯ ಡಬ್ಲ್ಯು.ಜಿ.ಎಸ್.ಎಚ್.ಎ ಸಂಸ್ಥೆಯ ಪ್ರಾಂಶುಪಾಲರಾದ ಪ್ರೊ. ಸತೀಶ್ ಜಯರಾಮ್ ಇವರು ವಿದ್ಯಾರ್ಥಿಗಳಿಗೆ ಹೋಟೆಲ್ ಮ್ಯಾನೇಜ್ ಮೆಂಟ್ ಕೋರ್ಸ್‌ನ ಅವಕಾಶಗಳ ಬಗ್ಗೆ ವಿಸ್ತ್ರತ ಮಾಹಿತಿ ನೀಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಜಿಲ್ಲಾ ಉಪನಿರ್ದೇಶಕರಾದ ಶ್ರೀ ಮಾರುತಿ ಇವರು 2024-25ನೇ ಸಾಲಿನ ಜಿಲ್ಲೆಯ ಶೈಕ್ಷಣಿಕ ವರ್ಷದ ಸಾಧನೆಗೆ ಕೊಡುಗೆಯಿತ್ತ ಉಪಸ್ಥಿತರಿದ್ದ ಖಾಸಗಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರನ್ನು ಗೌರವಿಸಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಶ್ರೀ ದಿನೇಶ್ ಎಂ ಕೊಡವೂರ್, ಸತತ ಎರಡು ವರ್ಷದ ಸಂಘದ ವಾರ್ಷಿಕ ಸಭೆಯನ್ನು ನಡೆಸಿಕೊಟ್ಟ ಮಾಹೆಯ ಟಾಜ್ಯ ಹಾಗೂ ಡಬ್ಲ್ಯು.ಜಿ.ಎಸ್.ಎಚ್.ಎ ಸಂಸ್ಥೆಗಳಿಗೆ ಸಂಘದ ಪರವಾಗಿ ಕೃತಜ್ಞತೆಯನ್ನು ಸಲ್ಲಿಸಿದರು. ಜಿಲ್ಲೆಯು ಕಳೆದ ಶೈಕ್ಷಣಿಕ ವರ್ಷದಲ್ಲಿ ರಾಜ್ಯಕ್ಕೆ ಪಿಯುಸಿ ಫಲಿತಾಂಶದಲ್ಲಿ ಪ್ರಥಮ ಸ್ಥಾನಿಯಾಗಿ ಮೂಡಿಬರಲು ಶ್ರಮಿಸಿದ ಎಲ್ಲಾ ಪ್ರಾಂಶುಪಾಲರನ್ನು ಅಭಿನಂದಿಸಿ, ಜಿಲ್ಲಾಡಳಿತ ಮತ್ತು ಉಪನಿರ್ದೇಶಕರ ಮಾರ್ಗದರ್ಶನವನ್ನು ಸ್ಮರಿಸಿದರು. ಪ್ರಾಂಶುಪಾಲರ ಸಂಘವು ಪ್ರತೀ ವರ್ಷದಂತೆ ಶೈಕ್ಷಣಿಕವಾಗಿ ಮಾತ್ರವಲ್ಲದೆ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಲಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಪಿಯುಸಿ ಸಾಧಕ ವಿದ್ಯಾರ್ಥಿಗಳನ್ನು, ಸಭೆಯಲ್ಲಿ ಉಪಸ್ಥಿತರಿದ್ದ ಪ್ರಾಂಶುಪಾಲರನ್ನು ಸಂಘ ಹಾಗೂ ಮಾಹೆ ಮಣಿಪಾಲದ ವತಿಯಿಂದ ಗೌರವಿಸಲಾಯಿತು. ಆನಂದತೀರ್ಥ ಪ.ಪೂ.ಕಾಲೇಜಿನ ಪ್ರಾಂಶುಪಾಲರಾದ ಶ್ರೀ ವಿಜಯ್‌ರಾವ್ ಸ್ವಾಗತಿಸಿ, ಜ್ಞಾನಸುಧಾ ಪ.ಪೂ.ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕಿ ಕು. ದರ್ಶಿನಿ ಕೆ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.