
ಮಲ್ಪೆ : ಆಳಸಮುದ್ರ ಮೀನುಗಾರಿಕೆಗೆ ನಿಷೇಧವಿರುವುದರಿಂದ ಮಲ್ಪೆ ಮೀನು ಮಾರುಕಟ್ಟೆಗೆ ಇದೀಗ ಹೊರರಾಜ್ಯಗಳಿಂದ ಮೀನುಗಳು ಲಗ್ಗೆ ಇಡುತ್ತಿವೆ. ತಮಿಳುನಾಡು, ಒಡಿಶಾ ಮತ್ತು ಆಂಧ್ರಪ್ರದೇಶಗಳಲ್ಲಿ ಈಗಾಗಲೇ ಯಾಂತ್ರಿಕ ಮೀನುಗಾರಿಕೆ ಆರಂಭಗೊಂಡಿದ್ದು, ಅಲ್ಲಿನ ಮೀನುಗಳು ಲಾರಿಗಳ ಮೂಲಕ ಮಲ್ಪೆ ಬಂದರಿಗೆ ಬರುತ್ತಿವೆ. ಕೇರಳದ ನಾಡದೋಣಿ ಮೀನುಗಳೂ ಇಲ್ಲಿಗೆ ಆಗಮಿಸುತ್ತಿವೆ. ಈ ಬಾರಿ ಆಂಧ್ರಪ್ರದೇಶ ಮತ್ತು ಒಡಿಶಾದಿಂದ ತಮಿಳುನಾಡಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮೀನು ಬಂದಿರುವುದು ವಿಶೇಷ.
ಕರಾವಳಿಯಲ್ಲಿ ಕಡಲು ಪ್ರಕ್ಷುಬ್ಧಗೊಂಡಿರುವುದರಿಂದ ಸ್ಥಳೀಯ ನಾಡದೋಣಿ ಮೀನುಗಾರರಿಗೆ (ಡಿಸ್ಕೋ) ಸಮುದ್ರಕ್ಕಿಳಿಯಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ತೆರಳಿದರೂ, ಸಾಕಷ್ಟು ಪ್ರಮಾಣದಲ್ಲಿ ಮೀನು ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹೊರರಾಜ್ಯಗಳ ಮೀನುಗಳಿಗೆ ಮಲ್ಪೆ ಬಂದರಿನಲ್ಲಿ ಭಾರೀ ಬೇಡಿಕೆ ಬಂದಿದೆ. ಪ್ರಸ್ತುತ ಆಳಸಮುದ್ರ ಮೀನುಗಾರಿಕೆಗೆ ನಿಷೇಧ ಇರುವುದರಿಂದ ಮೀನಿನ ಬೆಲೆಯೂ ದುಪ್ಪಟ್ಟಾಗಿದೆ.
ದಿನಕ್ಕೆ 120 ಟನ್ ಮೀನು ಮಾರಾಟ: ಮಲ್ಪೆ ಬಂದರಿಗೆ ನಿತ್ಯವೂ 20 ರಿಂದ 25 ಲಾರಿಗಳಲ್ಲಿ ಸುಮಾರು 100 ರಿಂದ 120 ಟನ್‌ಗಳಷ್ಟು ಮೀನುಗಳು ಬರುತ್ತಿವೆ. ರೆಬ್ಟಾಯಿ, ಬಂಗುಡೆ, ಬೂತಾಯಿ, ಸಿಗಡಿ, ಕೊಡ್ಡಯಿ, ಕೊಕ್ಕರ್, ಬಿಳಿ ಪಾಂಪ್ರಟ್, ಸೇರಿದಂತೆ ವಿವಿಧ ರೀತಿಯ ಚಿಲ್ಲರೆ ಮೀನುಗಳು ರಖಂ ಆಗಿ ಮಾರಾಟವಾಗುತ್ತಿವೆ. ಸ್ಥಳೀಯ ಮೀನು ವ್ಯಾಪಾರಿಗಳಲ್ಲದೆ, ಕುಂದಾಪುರ, ಮಂಗಳೂರು, ಬಂಟ್ವಾಳ, ಕಾರ್ಕಳ, ಮೂಡಬಿದ್ರೆ, ಸಾಗರದಿಂದಲೂ ವ್ಯಾಪಾರಿಗಳು ಆಗಮಿಸಿ ಮೀನು ಖರೀದಿಯಲ್ಲಿ ತೊಡಗುತ್ತಿದ್ದಾರೆ.
ಮೀನಿನ ಪ್ರಸ್ತುತ ದರ (ಜುಲೈ 15, ಮಂಗಳವಾರ): ಮಲ್ಪೆ ಬಂದರು ಮಾರುಕಟ್ಟೆಯಲ್ಲಿ ಮೀನಿನ ದರವು ದಿನಕ್ಕೊಂದು ರೀತಿಯಲ್ಲಿ ನಿಗದಿಯಾಗುತ್ತದೆ. ಶನಿವಾರದಂದು ದರಗಳು ಹೀಗಿದ್ದವು:
- 25 ಕೆ.ಜಿ.ಯ ಒಂದು ಬಾಕ್ಸ್ ರೆಬ್ಟಾಯಿ: ₹2,000 – ₹3,000
- ಬೂತಾಯಿ (25 ಕೆ.ಜಿ. ಬಾಕ್ಸ್): ₹5,000 – ₹6,000
- ದೊಡ್ಡ ಕೊಡ್ಡಯಿ: ₹300/ಕೆ.ಜಿ.
- ಸಣ್ಣ ಕೊಡ್ಡಯಿ: ₹200/ಕೆ.ಜಿ.
- ಸಿಗಡಿ (ಬಿಗ್): ₹450 – ₹500/ಕೆ.ಜಿ.
- ಸಿಗಡಿ (ತೆಂಬೆಲ್): ₹170 – ₹200/ಕೆ.ಜಿ.
- ಪರ್ಸಿನ್ ಬೋಟಿನ ಬಂಗುಡೆ: ₹300-₹350/ಕೆ.ಜಿ. (ಒಂದು ಕೆ.ಜಿ.ನಲ್ಲಿ 5-6)
- ಒಡಿಶಾ, ಆಂಧ್ರದ ಆಳಸಮುದ್ರ ಸಿಗುವ (ಲೈಲ್ಯಾಂಡ್) ಬಂಗುಡೆ: ₹180 – ₹200/ಕೆ.ಜಿ.
- ಕೊಕ್ಕರ್: ₹350/ಕೆ.ಜಿ.
- ಪಾಂಪ್ರಟ್: ₹1300 – ₹1500/ಕೆ.ಜಿ.