
ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿದ್ದು, ಹವಾಮಾನ ಇಲಾಖೆಯು ಮುನ್ನೆಚ್ಚರಿಕೆ ನೀಡಿದೆ. ಜುಲೈ 20 ರಿಂದ 24ರವರೆಗೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳ ಕೆಲವು ಕಡೆಗಳಲ್ಲಿ ಅತೀ ಭಾರಿ ಮಳೆಯಾಗುವ ಸಾಧ್ಯತೆಗಳಿರುವುದರಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಇನ್ನು ಬೆಳಗಾವಿ, ಮಂಡ್ಯ, ಮೈಸೂರು, ಚಾಮರಾಜನಗರ, ಬೀದರ್ ಹಾಗೂ ಕಲಬುರಗಿ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಭಾರೀ ಮಳೆಯಾಗುವ ಸಂಭವವಿದ್ದು, ಈ ಜಿಲ್ಲೆಗಳಿಗೆ ಸೋಮವಾರ ಹಳದಿ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಜುಲೈ 24ರವರೆಗೆ ಹಗುರದಿಂದ ಸಾಧಾರಣ ಮಳೆಯಾಗುವ ಹೆಚ್ಚಿನ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆಯ ವಿಜ್ಞಾನಿ ಸಿ.ಎಸ್. ಪಾಟೀಲ್ ಮಾಹಿತಿ ನೀಡಿದ್ದಾರೆ.
ಪೂರ್ವ ಅರಬ್ಬಿ ಸಮುದ್ರದ ಮಹಾರಾಷ್ಟ್ರ, ಕರ್ನಾಟಕ ಹಾಗೂ ಕೇರಳದ ಕರಾವಳಿ ತೀರದಲ್ಲಿ ಟ್ರಫ್ ಸಕ್ರಿಯವಾಗಿದ್ದು, ಸಿಯರ್‌ಝೀನ್ ಪೂರ್ವ-ಪಶ್ಚಿಮವಾಗಿ 17 ಡಿಗ್ರಿ ಉತ್ತರ ಅಕ್ಷಾಂಶದಲ್ಲಿ 5.8 ಕಿ.ಮೀ ಎತ್ತರದಲ್ಲಿದೆ. ಇದರ ಪ್ರಭಾವದಿಂದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲೂ ಜುಲೈ 24ರವರೆಗೆ ವ್ಯಾಪಕವಾಗಿ ಮಳೆಯಾಗುವ ಹೆಚ್ಚಿನ ಸಾಧ್ಯತೆಗಳಿವೆ. ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲಿಯೂ ಜುಲೈ 24ರವರೆಗೆ ಹಲವು ಕಡೆ ಮಳೆಯಾಗಲಿದೆ ಎಂದು ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.
ಮೀನುಗಾರರಿಗೆ ಎಚ್ಚರಿಕೆ
ಕರ್ನಾಟಕ ಕರಾವಳಿ ಮತ್ತು ಕರಾವಳಿ ತಟದ ಹತ್ತಿರ ಪ್ರತಿ ಗಂಟೆಗೆ 60 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಗಳಿರುವುದರಿಂದ, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.
ಮಳೆ ಪ್ರಮಾಣ
ಭಾನುವಾರ ವರದಿಯಾದ ಮಳೆ ಪ್ರಮಾಣದ ಪ್ರಕಾರ, ಕಾರವಾರದಲ್ಲಿ 12 ಸೆಂ.ಮೀ., ಉಡುಪಿಯ ಸಿದ್ದಾಪುರದಲ್ಲಿ 9 ಸೆಂ.ಮೀ., ಆಗುಂಬೆಯಲ್ಲಿ 7 ಸೆಂ.ಮೀ., ದಕ್ಷಿಣ ಕನ್ನಡದ ಮೂಲ್ಕಿಯಲ್ಲಿ 6 ಸೆಂ.ಮೀ., ಮತ್ತು ಗದಗ ಜಿಲ್ಲೆಯಲ್ಲಿ 4 ಸೆಂ.ಮೀ. ಮಳೆಯಾಗಿದೆ.